ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎನ್.ಎಸ್.ಹರ್ಡೆಕರ್‌ರವರಲ್ಲಿ ಶಿಸ್ತು, ದೇಶಭಕ್ತಿಯಿತ್ತು ಎಂದು ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳದ ವತಿಯಿಂದ ಬುಧವಾರ ನಡೆದ ಎನ್.ಎಸ್.ಹರ್ಡೆಕರ್‌ರವರ ೫೧ ನೇ ಪುಣ್ಯತಿಥಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
೧೯೨೩ ರಲ್ಲಿ ಸೇವಾದಳ ಸ್ಥಾಪನೆಯಾಯಿತು. ಘಟಪ್ರಭದಲ್ಲಿ ಪ್ರತಿ ವರ್ಷವೂ ಎನ್.ಎಸ್.ಹರ್ಡೆಕರ್‌ರವರ ಪುಣ್ಯತಿಥಿಯನ್ನು ಆಚರಿಸಲಾಗುತ್ತಿತ್ತು. ಮೇ.೭ ರಂದು ಅವರ ಜನ್ಮದಿನವನ್ನು ವಿಜೃಂಭಣೆಯಿಂದ ನೆರವೇರಿಸಲಾಗುವುದು. ಸೇವಾ ಮನೋಭಾವ, ತ್ಯಾಗ, ಸೇವಾದಳದ ಮಹತ್ವವನ್ನು ಹರ್ಡೆಕರ್ ಯುವ ಜನಾಂಗದಲ್ಲಿ ಬಿತ್ತಿದರು ಎಂದು ಹೇಳಿದರು.
ಕಾಂಗ್ರೆಸ್ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಪ್ರಕಾಶ್‌ರಾಮನಾಯ್ಕ ಮಾತನಾಡಿ ಧಾರವಾಡದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಎನ್.ಎಸ್.ಹರ್ಡೆಕರ್ ಉನ್ನತ ಶಿಕ್ಷಣ ಪಡೆದು ನಂತರ ಅಮೇರಿಕಾಕ್ಕೆ ತೆರಳಿ ಅಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಲಾಲಲಜಪುತ್‌ರಾಯರಿಂದ ಪ್ರೇರಣೆಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಾರೆ. ಜೈಲು ವಾಸ ಅನುಭವಿಸಿದ ನಂತರ ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿ ನೇಮಕಗೊಂಡಿದ್ದರೆಂದು ಸ್ಮರಿಸಿದರು.
ಸೈಯದ್ ವಲಿಖಾದ್ರಿ ಮಾತನಾಡಿ ಸೇವಾದಳಕ್ಕೆ ಎನ್.ಎಸ್.ಹರ್ಡೆಕರ್‌ರವರು ಸಲ್ಲಿಸಿದಂತ ಸೇವೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಸೇವಾದಳ ಎಂದರೆ ಶಿಸ್ತು. ಹಾಗಾಗಿ ಹರ್ಡೆಕರ್ ಎಂದರೆ ರೋಮಾಂಚನವಾಗುತ್ತದೆ. ಅನೇಕ ಮಹಾನ್ ನಾಯಕರುಗಳು ಸೇವಾದಳದಲ್ಲಿ ಕೆಲಸ ಮಾಡಿದ್ದಾರೆಂದು ನೆನಪಿಸಿಕೊಂಡರು.
ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಬಿ.ಮಂಜುನಾಥ್, ಮೈಲಾರಪ್ಪ, ಮುದಸಿರ್‌ನವಾಜ್, ಹೆಚ್.ಅಂಜಿನಪ್ಪ, ಕಾರ್ಯದರ್ಶಿ ಸಿ.ಆರ್.ತಿಪ್ಪೇಸ್ವಾಮಿ, ರಾಧಮ್ಮ, ಕೊಲ್ಲಮ್ಮ, ಟಿ.ಮಂಜುನಾಥ್, ಸಾರಂಭಿ, ಕೃಷ್ಣಪ್ಪ ಕರಿಕೆರೆ ಇವರುಗಳು ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದರು.



