ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಸಮಾನತೆ ದೊರೆಯಬೇಕಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ಲಿಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ವ್ಯವಸ್ಥೆಯಿಂದಾಗಿ ಸಮಾನತೆ ಕಾಣುತ್ತಿದ್ದೇವೆ. ಆದರೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ನಾವಿನ್ನೂ ಪೂರ್ಣ ಸಮಾನತೆ ಕಂಡುಕೊಂಡಿಲ್ಲ. ಸಂವಿಧಾನವನ್ನು ಉಳಿಸುತ್ತಾ, ಓದುತ್ತಾ ಮತ್ತು ತಿಳಿಯುತ್ತಾ ಎಲ್ಲರಿಗೂ ಸಮಾನತೆ ದೊರಕಿಸುವ ಹೋರಾಟ ಮುಂದುವರಿಸಬೇಕಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ‘ನಾನು ತಂದ ರಥವನ್ನು ಮುಂದಕ್ಕೆ ಕೊಂಡೊಯ್ಯಿರಿ, ಹಿಲಕ್ಕೆ ತಳ್ಳಬೇಡಿ' ಎಂದು ಹೇಳಿದ್ದರು. ಆ ರಥವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಇಂದಿನ ಯುವ ಜನತೆ ಹಾಗೂ ವಿದ್ಯಾರ್ಥಿಗಳ ಮೇಲಿದೆ. ಯುವಕರು ಸಂವಿಧಾನದ ಮೌಲ್ಯಗಳನ್ನು ಅರಿತು ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಸಾಮಾಜಿಕ ನ್ಯಾಯದ ಕಲ್ಪನೆಯೊಂದಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಬಡವರ, ಶೊಷಿತರ ಬದುಕಿಗೆ ಆಸರೆಯಾಗುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಇದೇ ಸೆಪ್ಟೆಂಬರ್ 16 ರಿಂದ 30ರವರೆಗೆ ನಡೆಯುವ 15 ದಿನಗಳ ಕಾಲ ಜರುಗುವ ಯುವ ಸಂಸತ್ತು ಸಭೆಗಳು ನಡೆಯಲಿದ್ದು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಜವಾಬ್ದಾರಿ ಅರಿತು ಗಂಭೀರವಾಗಿ ಸಂವಿಧಾನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಜಾಪ್ರಭುತ್ವದ ಮೌಲ್ಯ ರಕ್ಷಣೆ ಪ್ರತಿಯೊಬ್ಬರ ಹೊಣೆ: ಪ್ರಜೆಗಳೇ ದೇಶದ ಪ್ರಭುಗಳು ಎಂಬ ತತ್ವದಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು ಹಾಗೂ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಸಚಿವ ಟಿ. ರಘುಮೂರ್ತಿ ತಿಳಿಸಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007ರಲ್ಲಿ ಕೈಗೊಂಡ ನಿರ್ಣಯದಂತೆ 2008ರಿಂದ ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಹಾಗೂ ಬೀದರ್‍ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದು ಸಚಿವರು ಸ್ಮರಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಅಬ್ರಹಾಂ ಲಿಂಕನ್ ಅವರು ವ್ಯಾಖ್ಯಾನಿಸಿದಂತೆ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಇರುವ ಆಡಳಿತ ವ್ಯವಸ್ಥೆ ಉಳಿಯಬೇಕಾದರೆ ಸಂವಿಧಾನದ ರಕ್ಷಣೆ ಅತ್ಯಗತ್ಯ ಎಂದರು.
ಜಿಲ್ಲಾಧಿಕಾರಿ ಎಸ್. ರಮ್ಯ ಮಾತನಾಡಿ, ಪ್ರಜಾಪ್ರಭುತ್ವ ಎಂಬ ಆಡಳಿತ ವ್ಯವಸ್ಥೆ ಭಾರತ ದೇಶಕ್ಕೆ ಹೊಸದೇನಲ್ಲ. ರಾಜಪ್ರಭುತ್ವಕ್ಕೂ ಮೊದಲು, ವೈದಿಕ ಕಾಲದಲ್ಲೇ ‘ಸಭಾ' ಮತ್ತು 'ಸಮಿತಿ'ಗಳಂತಹ ಸಣ್ಣ ಸಣ್ಣ ಗಣರಾಜ್ಯ ಮಾದರಿಯ ಪ್ರಜಾಸತ್ತಾತ್ಮಕ ವ್ಯವಸ್ಥೆ ನಮ್ಮಲ್ಲಿ ಅಸ್ತಿತ್ವದಲ್ಲಿತ್ತು’ ಎಂದು ತಿಳಿಸಿದರು.
ಆರಂಭಿಕ ವೈದಿಕ ಕಾಲದಲ್ಲಿ ರಾಜಪ್ರಭುತ್ವ ಇರಲಿಲ್ಲ. ಬದಲಿಗೆ ಇಂದಿನ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಗಳಂತೆಯೇ ಕಾರ್ಯನಿರ್ವಹಿಸುತ್ತಿದ್ದ ‘ಸಭಾ' ಮತ್ತು ‘ಸಮಿತಿ'ಗಳ ಮೂಲಕ ಸಾರ್ವಜನಿಕರೇ ನಾಯಕರನ್ನು ಆಯ್ಕೆ ಮಾಡುತ್ತಿದ್ದರು ಮತ್ತು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ತಿಳಿಸಿದರು.
ಜಗತ್ತಿನ ಶ್ರೇಷ್ಠ ತತ್ವಜ್ಞಾನಿ ಗೌತಮ ಬುದ್ಧ ಅವರು ಕೂಡ ‘ಶಾಕ್ಯ' ಎಂಬ ಗಣರಾಜ್ಯ ಹಿನ್ನೆಲೆಯಿಂದ ಬಂದವರು. ಅವರ ವಿಶಾಲ ಆಲೋಚನೆಗಳು ಮತ್ತು ಸಮಾನತೆಯ ಚಿಂತನೆಗಳಿಗೆ ಅಂದಿನ ಪ್ರಜಾಸತ್ತಾತ್ಮಕ ವಾತಾವರಣವೇ ಪ್ರೇರಣೆಯಾಗಿತ್ತು. ಹೀಗಾಗಿ ಪ್ರಜಾಪ್ರಭುತ್ವದ ಕಲ್ಪನೆ ನಮಗೆ ಹೊಸತಲ್ಲ, ಅದು ನಮ್ಮ ಸಂಸ್ಕøತಿಯ ಬೇರುಗಳಲ್ಲೇ ಇದೆ. ಹಳೆಯ ಬೇರು, ಹೊಸ ಚಿಗುರು ಕೂಡಿದರೆ ಮರ ಸೊಬಗು' ಎಂಬ ಕವಿವಾಣಿಯಂತೆ, ನಮ್ಮ ಇತಿಹಾಸದ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಇಂದಿನ ಯುವಜನತೆ ಸುಂದರ ಹಾಗೂ ಪ್ರಜಾಸತ್ತಾತ್ಮಕ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಮೈಸೂರಿನ ಚಿಂತಕರು ಹಾಗೂ ಬರಹಗಾರ ಅರಕಲವಾಡಿ ನಾಗೇಂದ್ರ ಉಪನ್ಯಾಸ ನೀಡಿ, ರಾಜಕೀಯವಾಗಿ ಸಮಾಜದಲ್ಲಿ ಸಮಾನತೆ ಕಂಡುಕೊಂಡಂತೆ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲೂ ಆದಷ್ಟು ಬೇಗ ಸಮಾನತೆ ಸಾಧಿಸಬೇಕಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ನಮಗೆ ಲಭಿಸಿರುವ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯು ಪೂರ್ವಜರ ತ್ಯಾಗದ ಫಲವಾಗಿದೆ. ಅಂಬೇಡ್ಕರ್ ಅವರು ಹೇಳಿದಂತೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗದಿದ್ದರೆ ಸಂವಿಧಾನವು ತನ್ನ ಆಶಯ ಹಾಗೂ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹಕ್ಕುಗಳನ್ನು ಕಳೆದುಕೊಂಡರೆ ಮನುಷ್ಯ ಸತ್ತಂತೆ ಬದುಕಬೇಕಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಳೆದ ಬಾರಿ ಬೀದರ್‍ನಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದ ಮೂಲಕ ಸಂವಿಧಾನ ರಕ್ಷಣೆಯ ಪ್ರಬಲ ಸಂದೇಶ ರವಾನಿಸಲಾಗಿತ್ತು. ಸಂವಿಧಾನ ಪ್ರಸ್ತಾವನೆ ವಾಚನ, ಪ್ರಜಾಪ್ರಭುತ್ವ ದಿನಾಚರಣೆಯಂತಹ ಕಾರ್ಯಕ್ರಮಗಳು ಜನರಲ್ಲಿ ಅರಿವು ಮೂಡಿಸುತ್ತಿವೆ ಎಂದರು.
ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಹಾಗೂ ಸಾಮಾಜಿಕ ಅರಿವು ಬೆಳೆಸಲು ಸರ್ಕಾರ ಹಮ್ಮಿಕೊಂಡಿರುವ ‘ಯುವ ಸಂಸತ್’ ಕಾರ್ಯಕ್ರಮವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು, ಸಂವಿಧಾನ ಪೀಠಿಕೆಯನ್ನು ವಾಚಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಪೀಠಿಕೆ ಹಾಗೂ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.




