ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಬಡ ಮಹಿಳೆಯರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಯೋಜನೆ ಯಶೋಗಾಥೆಯ ಬದಲು ಲೂಟಿ ಮತ್ತು ಅಕ್ರಮದ ಯಶೋಗಾಥೆ ಬರೆಯುತ್ತಿದೆ" ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮೂರು ವರ್ಷಗಳ ಸಂಭ್ರಮವನ್ನು ಖಂಡಿಸಿ ಮಾತನಾಡಿದ ಅವರು, "ಚುನಾವಣೆ ವೇಳೆ ಪ್ರತಿ ತಿಂಗಳು ₹2,000 ಖಾತೆಗೆ ತಲುಪುತ್ತದೆ ಎಂದು ಬೊಗಳೆ ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಈಗ ಎರಡು ತಿಂಗಳ ಸುಮಾರು ₹5,000 ಕೋಟಿ ಬಾಕಿ ಹಣ ನೀಡದೆ ಪಂಗನಾಮ ಹಾಕಿದ್ದಾರೆ. ಪತ್ರಿಕಾ ಜಾಹೀರಾತಿಗೆ ಸಾವಿರಾರು ಕೋಟಿ ಸುರಿಯುವ ಸರ್ಕಾರಕ್ಕೆ ಮಹಿಳೆಯರಿಗೆ ನೀಡಲು ಹಣವಿಲ್ಲವೇ?" ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯೋಜನೆಯಲ್ಲಿ ಬಂದಿದೆ ಎನ್ನಲಾದ ಸಾಲು ಸಾಲು ಅಕ್ರಮಗಳನ್ನು ಪಟ್ಟಿ ಮಾಡಿದ ಅವರು.
CAG ವರದಿ ಅಕ್ರಮ: ಮಹಾಲೇಖಪಾಲರ (ಸಿಎಜಿ) ಪರಿಶೀಲನೆಯಲ್ಲಿ ₹225 ಕೋಟಿಗೂ ಹೆಚ್ಚು ಭಾರಿ ಲೂಟಿ ಪತ್ತೆಯಾಗಿದೆ.
ಮೃತರ ಖಾತೆಗೆ ಹಣ: 2.88 ಲಕ್ಷ ಮೃತ ಫಲಾನುಭವಿಗಳ ಹೆಸರಿನಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಲಾಗಿದ್ದು, ₹115 ಕೋಟಿ ಸತ್ತವರ ಖಾತೆಗೆ ಜಮೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.
ಬ್ಯಾಂಕ್ ಖಾತೆ ಇಲ್ಲದೆ ಪಾವತಿ: ಖಾತೆ ಸಂಖ್ಯೆಯೇ ಇಲ್ಲದೆ 23,262 ಪಾವತಿಗಳ ಮೂಲಕ ₹46.52 ಕೋಟಿ ಅಕ್ರಮ ಎಸಗಲಾಗಿದೆ.
ಬೋಗಸ್ ಖಾತೆಗಳು: ಒಂದೇ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಲಿಂಕ್ ಮಾಡಿ ಅಕ್ರಮ ನಡೆಸಲಾಗಿದೆ.
ತಕ್ಷಣವೇ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ₹5,000 ಕೋಟಿ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಬೇಕು ಹಾಗೂ ಹೈಕೋರ್ಟ್ ನ್ಯಾಯಾಧೀಶರಿಂದ ಈ ಭಾರಿ ಅಕ್ರಮದ ತನಿಖೆ ನಡೆಸಬೇಕೆಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.




