ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಬಹುಕೋಟಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್‌ಚಿಟ್‌ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ನಿರ್ಧಾರ 'ಅಸ್ವಾಭಾವಿಕ'ವಾಗಿದ್ದು, ಸಮಾಜಕ್ಕೆ ಹಾಗೂ ಭ್ರಷ್ಟರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಪೀಠ ಕಿಡಿಕಾರಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಅಹ್ಸನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಹೈಕೋರ್ಟ್‌ನ ನಡೆಗೆ ಬೇಸರ ವ್ಯಕ್ತಪಡಿಸಿದ ಪೀಠ, "ಇಂತಹ ಗಂಭೀರ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ರದ್ದುಪಡಿಸುವುದು ಅತ್ಯಂತ ಅಪಾಯಕಾರಿ. ಇಂತಹ ತೀರ್ಪುಗಳು ಭವಿಷ್ಯದಲ್ಲಿ ಲಂಚ ಪಡೆಯುವ ಭ್ರಷ್ಟರಿಗೆ ಕಾನೂನಿನಿಂದ ರಕ್ಷಣೆ ನೀಡಿದಂತಾಗುತ್ತದೆ ಮತ್ತು ಇಡೀ ಕಾನೂನು ವ್ಯವಸ್ಥೆಗೆ ಕೆಟ್ಟ ನಿದರ್ಶನವಾಗಲಿದೆ" ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಬಯಲಾದ ಜಾಲ: 'ಕೆಮಿಕಲ್ಸ್ ಕಾರ್ಪೊರೇಷನ್' ಸಂಸ್ಥೆಯ ಪಾಲುದಾರ ಶ್ರೇಯಸ್ ಕಶ್ಯಪ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಹಗರಣವನ್ನು ಬಯಲಿಗೆಳೆದಿದ್ದರು.
ಲಂಚದ ಬೇಡಿಕೆ: 2023ರ ಜನವರಿಯಲ್ಲಿ ಕೆಎಸ್‌ಡಿಎಲ್‌ಗೆ ರಾಸಾಯನಿಕ ತೈಲ ಪೂರೈಸುವ ಟೆಂಡರ್ ಲಭಿಸಿತ್ತು. ಸರಬರಾಜು ಆದೇಶ (ವರ್ಕ್ ಆರ್ಡರ್) ನೀಡಲು ಮತ್ತು ಬಿಲ್ ಬಾಕಿ ಬಿಡುಗಡೆ ಮಾಡಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಭಾರಿ ಪ್ರಮಾಣದ (₹81 ಲಕ್ಷ) ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ರೆಡ್‌ಹ್ಯಾಂಡ್ ಟ್ರಾಪ್: ಕಚೇರಿಯಲ್ಲಿ ಮುಂಗಡವಾಗಿ ₹40 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಶಾಸಕರ ಪುತ್ರ, ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.
ಎಫ್‌ಐಆರ್ ದಾಖಲು: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿ (A-1) ಹಾಗೂ ಪುತ್ರ ಪ್ರಶಾಂತ್ ಅವರನ್ನು ಎರಡನೇ ಆರೋಪಿ (A-2) ಎಂದು ಹೆಸರಿಸಲಾಗಿತ್ತು.
ಹೈಕೋರ್ಟ್ ನೀಡಿದ್ದ ತೀರ್ಪು: ತಮ್ಮ ವಿರುದ್ಧದ ಚಾರ್ಜ್‌ಶೀಟ್ ರದ್ದುಗೊಳಿಸುವಂತೆ ಕೋರಿ ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, 2023ರ ಡಿಸೆಂಬರ್‌ನಲ್ಲಿ "ಶಾಸಕರೇ ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ" ಎಂದು ಅಭಿಪ್ರಾಯಪಟ್ಟು ಅವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಿತ್ತು. ಪ್ರಸ್ತುತ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಲೋಕಾಯುಕ್ತ ಸವಾಲು ಮಾಡಿದೆ.




