ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚೆಕ್ ಬೌನ್ಸ್ ಪ್ರಕರಣದ ಆರಂಭಿಕ ಹಂತದಲ್ಲಿ ನ್ಯಾಯಾಲಯಕ್ಕೆ ಲೀಗಲ್ ನೋಟಿಸ್ ಪ್ರತಿ ಸಲ್ಲಿಸಲು ವಿಫಲವಾದರೆ, ಅದನ್ನು ಪ್ರಕರಣದ ಮೂಲಭೂತ ಲೋಪವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದೊಂದು ಸರಿಪಡಿಸಬಹುದಾದ ಲೋಪವೆಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, 1 ಕೋಟಿ ರೂಪಾಯಿ ಮೊತ್ತದ ಎರಡು ಚೆಕ್ ಬೌನ್ಸ್ ಪ್ರಕರಣಗಳನ್ನು ರದ್ದುಗೊಳಿಸಲು ನಿರಾಕರಿಸಿದೆ.
ಬೆಂಗಳೂರಿನ 15ನೇ ಎಸಿಎಂಎಂ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ನಿವಾಸಿ ಎ. ಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ನ್ಯಾಯಾಲಯದ ಪ್ರಮುಖ ಅಂಶಗಳು: ಎರಡು ಚೆಕ್ಗಳು ಅಮಾನ್ಯಗೊಂಡಿರುವುದು, ನಿಗದಿತ ಅವಧಿಯಲ್ಲಿ ನೋಟಿಸ್ ಜಾರಿಯಾಗಿರುವುದು ಮತ್ತು ಅದಕ್ಕೆ ಆರೋಪಿ ಕಡೆಯಿಂದ ಪ್ರತ್ಯುತ್ತರ ನೀಡಿರುವುದು ವಿವಾದಾತೀತವಾಗಿದೆ.
ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇರುವುದರಿಂದ, ಮುಂದಿನ ಹಂತದಲ್ಲಿ ಅಗತ್ಯ ದಾಖಲೆಗಳು ಹಾಗೂ ಹೆಚ್ಚುವರಿ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ, ಕೇವಲ ಒಂದು ನೋಟಿಸ್ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಸ್ಥಿರಾಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರುದಾರ ಬಿ. ಲಿಂಗಪ್ಪ ಅವರಿಗೆ ಆರೋಪಿ ಪ್ರಸಾದ್ ತಲಾ 50 ಲಕ್ಷ ರೂ.ಗಳಂತೆ ಒಟ್ಟು 1 ಕೋಟಿ ರೂ. ಮೊತ್ತದ ಎರಡು ಚೆಕ್ಗಳನ್ನು ನೀಡಿದ್ದರು.
ಚೆಕ್ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಲಿಂಗಪ್ಪ ದೂರು ದಾಖಲಿಸಿದ್ದರು. ಆದರೆ, ವಿಚಾರಣೆ ವೇಳೆ ದೂರುದಾರರು ಎರಡು ನೋಟಿಸ್ಗಳ ಪೈಕಿ ಒಂದನ್ನು ಮಾತ್ರ ಸಲ್ಲಿಸಿದ್ದಾರೆ ಹಾಗೂ ನೋಟಿಸ್ಗಳಲ್ಲಿ ವಿಭಿನ್ನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಸಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರುದಾರರ ಪರ ವಕೀಲರು ಇದನ್ನು ಅಜಾಗರೂಕತೆಯಿಂದಾದ ಲೋಪವಷ್ಟೇ ಎಂದು ಸಮರ್ಥಿಸಿಕೊಂಡಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಪ್ರಸಾದ್ ಅವರ ಅರ್ಜಿಯನ್ನು ವಜಾಗೊಳಿಸಿದೆ.




