ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್-ಮ್ಯಾಗ್ನೆಟ್ ನೀತಿ ಹಾಗೂ ಎಡಿಬಿ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ಸಾಲದ ಒಪ್ಪಂದದ ಮೂಲಕ ರಾಜ್ಯದ 45,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು 'ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ' ಹಾಗೂ 'ಎಐಡಿಎಸ್ಓ' ತೀವ್ರವಾಗಿ ಖಂಡಿಸಿವೆ.
ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಒಪ್ಪಂದ ಹಾಗೂ ಮುಖ್ಯಮಂತ್ರಿಗಳು ಶಿಕ್ಷಕರ ಕುರಿತು ನೀಡಿರುವ ಹೇಳಿಕೆಗಳು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು, ಇದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಬರೆಯುತ್ತಿರುವ ಮರಣ ಶಾಸನವಾಗಿದೆ ಎಂದು ಪ್ರಮುಖರು ಆಪಾದಿಸಿದ್ದಾರೆ. ಬೆಂಗಳೂರು ದಕ್ಷಿಣದ ಕನಕಪುರದಲ್ಲಿ ಈಗಾಗಲೇ 14 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಿರುವುದು ನಾಡಿನ ಜನತೆಗೆ ಮಾಡಿರುವ ದ್ರೋಹ ಎಂದು ಆರೋಪಿಸಿರುವ ಅವರು, ಸರ್ಕಾರವು ತನ್ನ ಈ ಶಿಕ್ಷಣ ವಿರೋಧಿ ನೀತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಪ್ರೊ. ಎ. ಮುರಿಗೆಪ್ಪ, ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ನಿರಂಜನಾರಾಧ್ಯ ವಿ.ಪಿ., ಪ್ರೊ. ಸಬಿಹಾ ಭೂಮಿಗೌಡ, ಶಿವಸುಂದರ್, ಅಶ್ವಿನಿ ಕೆ.ಎಸ್., ಅಜಯ್ ಕಾಮತ್ ಸೇರಿದಂತೆ ಹೂವಿನಹಡಗಲಿ/ವಿವಿಧ ಭಾಗಗಳ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಚಿಂತಕರು ಈ ಪತ್ರಿಕಾ ಪ್ರಕಟಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.




