ಚಂದ್ರವಳ್ಳಿ ನ್ಯೂಸ್ ಹಿರಿಯೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಕಂಗಾಲಾಗಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ
ಕೆ. ಮಂಜುನಾಥ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನೆಪಮಾತ್ರಕ್ಕೆ ಬರಗಾಲ ವೀಕ್ಷಿಸಿದ್ದು, ಇದುವರೆಗೂ ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ.
ಜಿಲ್ಲಾಡಳಿತ ಜಿಲ್ಲೆಯಲ್ಲಿ ಬರಗಾಲ ಹಾಗೂ ರೈತರ ಒಣಗಿರುವ ಬೆಳೆ ಹಾನಿ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ, ವಾಸ್ತವಿಕ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು.
ಅದರಲ್ಲೂ ಹಿರಿಯೂರು ತಾಲ್ಲೂಕಿನಲ್ಲಿ ವಿವಿ ಸಾಗರ ಹಾಗೂ ಗಾಯಿತ್ರಿ ಡ್ಯಾಂ ಎರಡು ಜಲಾಶಗಳಿದ್ದು,
ಈ ಜಲಾಶಯಗಳಿಗೆ
ಈ ವರ್ಷದಲ್ಲಿ ಒಂದು ಹನಿ ನೀರು ಸಂಗ್ರಹವಾಗಿಲ್ಲ. ಈಗಾಗಲೇ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಡ್ಯಾಂ ಡೆಡ್ ಸ್ಟೋರೇಜ್ ತಳಮಟ್ಟದ ಹಂತ ತಲುಪಿದೆ.
ಐಮಂಗಲ, ಕಸಬಾ ಹಾಗೂ ಕಲ್ಲಹಳ್ಳಿ ಭಾಗದಲ್ಲಿನ ರೈತರ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರು ಇಲ್ಲದೆ ಅಡಿಕೆ, ತೆಂಗಿನ ತೋಟಗಳು ಸಂಪೂರ್ಣವಾಗಿ ಒಣಗಿವೆ, ರೈತರು ತೋಟಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.
ದನ, ಕುರಿ, ಮೇಕೆಗಳಿಗೆ ಮೇವು ಇಲ್ಲದೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಇಲ್ಲಿನ ಜನರಿಗೆ ಉದ್ಯೋಗವಿಲ್ಲದೆ ಕೆಲಸ ಹುಡುಕಿಕೊಂಡು ಬೆಂಗಳೂರು, ದಾವಣಗೆರೆಯಂತಹ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಇದರ ಬಗ್ಗೆ ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಜಾನುವಾರುಗಳನ್ನು ಉಳಿಸಿಕೊಳ್ಳಲು ಗೋಶಾಲೆ ಆರಂಭಿಸಬೇಕು. ರೈತರಿಗೆ ಬೆಳೆ ಹಾನಿ ಪರಿಹಾರದ ಜೊತೆಗೆ ಎಕರೆಗೆ ರೂ.15 ಸಾವಿರದಿಂದ 20 ಸಾವಿರದವರೆಗೆ ಸಹಾಯಧನ ನೀಡಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ
ಈ ಕುರಿತು ಕ್ರಮ ಕೈಗೊಳ್ಳಬೇಕು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.



