ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಹಾಗೂ 'ದಕ್ಷಿಣ ಕಾಶಿ' ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತಾದಿಗಳು ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಜಿಲ್ಲಾ ಅಧ್ಯಕ್ಷ ಪರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಆವರಣಕ್ಕೆ ಆಗಮಿಸುವ ಭಕ್ತರಿಗೆ, ವಿಶೇಷವಾಗಿ ವಯಸ್ಸಾದ ವೃದ್ಧರು, ಮಕ್ಕಳು ಹಾಗೂ ಮಹಿಳೆಯರಿಗೆ ತುರ್ತು ಮಲಮೂತ್ರ ವಿಸರ್ಜನೆಯ ಸನ್ನಿವೇಶ ಎದುರಾದರೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗೆ ಶೌಚಾಲಯವಿಲ್ಲದಿರುವುದು ದೌರ್ಭಾಗ್ಯ:
"ಕರ್ನಾಟಕದಾದ್ಯಂತ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿದರೆ ಎಲ್ಲೂ ಕಾಣಸಿಗದಂತಹ ಸ್ಥಿತಿ ಇಲ್ಲಿದೆ. ಇಷ್ಟೊಂದು ದೊಡ್ಡ ಪುಣ್ಯಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ.
ತಹಶೀಲ್ದಾರ್ ಹಾಗೂ ಮುಜರಾಯಿ ಇಲಾಖೆಯ ಶ್ರೀ ತೇರು ಮಲ್ಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯವರು ಶೌಚಾಲಯ ನಿರ್ಮಾಣ ಮಾಡಲು ಏಕೆ ಮೀನಾಮೇಷ ಎಣಿಸುತ್ತಿದ್ದಾರೋ ತಿಳಿಯುತ್ತಿಲ್ಲ" ಎಂದು ಪರಮೇಶ್ ಪ್ರಶ್ನಿಸಿದ್ದಾರೆ.
ತ್ವರಿತ ಪರಿಶೀಲನೆಗೆ ಆಗ್ರಹ:
ಸಂಬಂಧಪಟ್ಟ ಗೌರವಾನ್ವಿತ ಅಧಿಕಾರಿಗಳು ಒಮ್ಮೆ ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿ, ಈಗಿರುವ ಶೌಚಾಲಯದ ದುಸ್ಥಿತಿಯನ್ನು ಗಮನಿಸಿದರೆ ಅಲ್ಲಿನ ವಾಸ್ತವ ಚಿತ್ರಣ ಅರಿವಿಗೆ ಬರಲಿದೆ. ಆದ್ದರಿಂದ ಅಧಿಕಾರಿಗಳು ಭಕ್ತಾದಿಗಳ ಹಾಗೂ ತಾಯಂದಿರ ಅಳಲನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕು. ಹಾಗೂ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಶೀಘ್ರವಾಗಿ ಸುಸಜ್ಜಿತ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಒತ್ತಾಯಿಸಿದೆ.




