ಚಂದ್ರವಳ್ಳಿ ನ್ಯೂಸ್, ತುಮಕೂರು:
ರಾಜ್ಯದಲ್ಲಿ ಚುನಾವಣಾ ವ್ಯವಸ್ಥೆಯು ಅತ್ಯಂತ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ವ್ಯವಸ್ಥೆ ಸುಧಾರಣೆಯಾಗದೆ ತಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುವುದು ಆತ್ಮವಂಚನೆಯಾಗುತ್ತದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಹಿರಿಯ ರಾಜಕಾರಣಿ, ದಿವಂಗತ 'ವೀರಣ್ಣ ನುಡಿನಮನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
"ಇಂದು ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಈ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರುವುದೇ ಹಿರಿಯ ರಾಜಕಾರಣಿ ವೀರಣ್ಣ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ" ಎಂದು ಹೇಳಿದರು.
80 ವರ್ಷ ವಯಸ್ಸಾಗಿದೆ, ಸಕ್ರಿಯ ರಾಜಕಾರಣದಲ್ಲಷ್ಟೇ ಇರುತ್ತೇನೆ:
"ನನಗೆ ಈಗ 80 ವರ್ಷ ವಯಸ್ಸಾಗಿದ್ದು, ಸದ್ಯ ಆರೋಗ್ಯವಾಗಿದ್ದೇನೆ. ಇನ್ನು ಎಷ್ಟು ವರ್ಷ ಬದುಕಿರುತ್ತೇನೆಯೋ ಗೊತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದು ನನ್ನ ವೈಯಕ್ತಿಕ ತೀರ್ಮಾನ. ಆದರೆ, ಚುನಾವಣೆಗೆ ಸ್ಪರ್ಧಿಸದಿದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ" ಎಂದು ಅವರು ತಿಳಿಸಿದರು.
1991ರಲ್ಲೇ ಲೋಕಸಭೆಗೆ ನಿಲ್ಲಬಾರದು ಎಂದು ನಿರ್ಧರಿಸಿದ್ದೆ:
"ಚುನಾವಣೆಯಲ್ಲಿ ಆಯೋಗ ನಿಗದಿಪಡಿಸಿದಷ್ಟು ಮಾತ್ರವೇ ಹಣ ಖರ್ಚು ಮಾಡಬೇಕು. ಆದರೆ ಇಂದಿನ ದಿನಗಳಲ್ಲಿ ಅದು ಸಾಧ್ಯವಾಗುತ್ತಿಲ್ಲ. 1983ರ ಚುನಾವಣೆಗೂ ಹಾಗೂ ಇಂದಿನ ಚುನಾವಣೆಗಳಿಗೂ ಆಕಾಶ-ಭೂಮಿಯಷ್ಟು ವ್ಯತ್ಯಾಸವಿದೆ. ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಅವಕಾಶವಿತ್ತಾದರೂ ನಾನು ಅದನ್ನು ನಿರಾಕರಿಸಿದೆ.
1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 10 ಸಾವಿರ ಮತಗಳಿಂದ ಸೋಲು ಕಂಡಿದ್ದೆ. ಆಗ ರಾಮಕೃಷ್ಣ ಹೆಗಡೆಯವರೂ ಸೋತಿದ್ದರು. ಅಂದೇ ನಾನು ಮತ್ತೆ ಲೋಕಸಭೆಗೆ ಎಂದೂ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ" ಎಂದು ಹಳೆಯ ನೆನಪುಗಳನ್ನು ಮೆಲಕುಹಾಕಿದರು.
ವೀರಣ್ಣ ಅವರ ಸರಳತೆ ಇಂದಿನ ರಾಜಕಾರಣದಲ್ಲಿ ಅಪರೂಪ:
ವೀರಣ್ಣ ಅವರ ಪ್ರಾಮಾಣಿಕತೆ, ಬದ್ಧತೆ ಹಾಗೂ ಸರಳತೆಯನ್ನು ಇಂದಿನ ರಾಜಕಾರಣದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಕಷ್ಟಕರ. 1983ರಲ್ಲಿ ನಾನು ವೀರಣ್ಣ ಅವರೊಂದಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದೆ. ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಸದನದಲ್ಲಿ ಅತ್ಯಂತ ಸಮರ್ಥವಾಗಿ ಪ್ರಸ್ತಾಪಿಸುತ್ತಿದ್ದರು. ಹೀಗಾಗಿ ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ಸಾರ್ವಜನಿಕರು ಹಾಗೂ ಯುವಜನತೆ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.
ಕಲುಷಿತ ರಾಜಕಾರಣದಲ್ಲಿ ವೀರಣ್ಣ ಅವರದ್ದು ವಿರಳ ವ್ಯತ್ವ: ಡಾ. ಜಿ. ಪರಮೇಶ್ವರ್
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, "ಇಂದಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣ ಅವರಂತಹ ನಿಷ್ಠಾವಂತ ವ್ಯಕ್ತಿತ್ವಗಳು ಅತ್ಯಂತ ವಿರಳ. ಹಣವೇ ಎಲ್ಲವನ್ನೂ ನಿರ್ಧರಿಸುವ ಈ ಕಾಲದಲ್ಲೂ ವೀರಣ್ಣ ಅವರು ತಮ್ಮ ತತ್ತ್ವ-ಸಿದ್ಧಾಂತಗಳಿಂದ ಎಂದಿಗೂ ರಾಜಿಯಾಗಲಿಲ್ಲ.
2008ರ ಕೊರಟಗೆರೆ ಚುನಾವಣೆಯಲ್ಲಿ ಅವರು ನನಗೆ ಬೆಂಬಲವಾಗಿ ನಿಂತಿದ್ದನ್ನು ಎಂದಿಗೂ ಮರೆಯಲಾಗದು. ತುಮಕೂರು ಜಿಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಸ್ಮಾರಕ ಅಥವಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು. ಅಲ್ಲದೆ, ಇಂದಿನ ಯುವಜನತೆ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದು, ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿರುವುದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.




