ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಮಯ ಕೋರಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಭೇಟಿ ಹಾಗೂ ಶಾಶ್ವತ ಪರಿಹಾರಕ್ಕೆ ಚರ್ಚೆ:
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಿ ಮೋದಿಯವರ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಲಾಗಿದ್ದು, ದಿನಾಂಕ ನಿಗದಿಯಾದ ತಕ್ಷಣ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು. "ಕಬ್ಬು ಇದ್ದರೆ ಕಾರ್ಖಾಣೆ ಉಳಿಯುತ್ತದೆ, ಕಾರ್ಖಾನೆ ನಷ್ಟವಾಗದಿದ್ದರೆ ಮಾತ್ರ ಮಾಲೀಕರು ಹಾಗೂ ಕಾರ್ಮಿಕರು ಉಳಿಯಲು ಸಾಧ್ಯ. ಇದು ಕೇವಲ ಒಬ್ಬರ ಸಮಸ್ಯೆಯಲ್ಲ, ಎಲ್ಲರ ಬದುಕಿಗೆ ಸಂಬಂಧಿಸಿದ ಪ್ರಶ್ನೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಾಗುವುದು. ಈ ಹಿಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ನೀಡಿದ್ದ ಮಾತಿನಂತೆ, ಈ ಸಭೆಗೆ ಕೇಂದ್ರ ಸಚಿವರು, ಸಂಸದರು ಹಾಗೂ ಆ ಭಾಗದ ರಾಜ್ಯ ಸಚಿವರಿಗೂ ಆಹ್ವಾನ ನೀಡಲಾಗುವುದು. ಯಾರೊಬ್ಬರ ಮೇಲೂ ಜವಾಬ್ದಾರಿಯ ಹೊರೆ ಹೊರಿಸದೆ, ಎಲ್ಲರ ಸಹಕಾರದೊಂದಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.



