ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೌರಿ-ಗಣೇಶ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆಯ ದಿನದಂದು ತಾಯಿ ಸ್ವರ್ಣಗೌರಿಯನ್ನು ಹಾಗೂ ಚೌತಿಯ ದಿನದಂದು ಮಗ ಗಣೇಶನನ್ನು ಪೂಜಿಸುವುದು ನಮ್ಮ ಸನಾತನ ಪದ್ಧತಿ.
*ತವರು ಮನೆಗೆ ಗೌರಿಯ ಆಗಮನ*
ಪುರಾಣದ ಪ್ರಕಾರ, ಗೌರಿಯು ಆದಿಶಕ್ತಿ ಹಾಗೂ ಪಾರ್ವತಿಯ ಸ್ವರೂಪ. ಶಿವನನ್ನು ಪತಿಯನ್ನಾಗಿ ಪಡೆಯಲು ಕಠಿಣ ತಪಸ್ಸು ಮಾಡಿ ಆತನ ಅರ್ಧಾಂಗಿನಿಯಾದಳು. ಒಮ್ಮೆ ಕೈಲಾಸದಲ್ಲಿ ಶಿವ-ಪಾರ್ವತಿಯರು ಸಂಭಾಷಣೆಯಲ್ಲಿ ತೊಡಗಿದ್ದಾಗ, ಪಾರ್ವತಿಯು ತನಗೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ತವರು ಮನೆಗೆ ಹೋಗಿ ಅಲ್ಲಿನ ಜನರನ್ನು ನೋಡುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಅದಕ್ಕೆ ಸಮ್ಮತಿಸಿದ ಶಿವನು, "ಯಾವಾಗ ಮತ್ತೆ ಮರಳುವೆ?" ಎಂದು ಕೇಳಿದಾಗ, ಭಾದ್ರಪದ ಮಾಸದ ನಿರ್ದಿಷ್ಟ ದಿನದಂದು ತವರಿಗೆ ಹೋಗಿ ಬರುವುದಾಗಿ ತಿಳಿಸುತ್ತಾಳೆ. ಹೀಗೆ ತಾಯಿ ಗೌರಿಯು ತವರು ಮನೆಗೆ ಬರುವ ಸಂಕೇತವಾಗಿ 'ಸ್ವರ್ಣಗೌರಿ ಹಬ್ಬ'ವನ್ನು ಮತ್ತು ಆಕೆಯನ್ನು ಮರಳಿ ಕೈಲಾಸಕ್ಕೆ ಕರೆದೊಯ್ಯಲು ಮಗ ಗಣೇಶ ಬರುವ ಪ್ರತೀಕವಾಗಿ 'ಗಣೇಶ ಚತುರ್ಥಿ'ಯನ್ನು ಆಚರಿಸಲಾಗುತ್ತದೆ.
*ಗಣೇಶನ ಸೃಷ್ಟಿ ಮತ್ತು ಪ್ರಥಮ ಪೂಜೆಯ ವರ*
ಒಮ್ಮೆ ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವ ಮುನ್ನ ಕಾವಲಿಗಾಗಿ ತನ್ನ ದೇಹದ ಅರಿಶಿನದ ತೈಲ/ಮಣ್ಣಿನಿಂದ ಸುಂದರ ಬಾಲಕನ ಮೂರ್ತಿಯನ್ನು ಮಾಡಿ ಜೀವ ತುಂಬುತ್ತಾಳೆ. ಯಾರನ್ನೂ ಒಳಗೆ ಬಿಡದಂತೆ ಆ ಬಾಲಕನಿಗೆ ಆಜ್ಞಾಪಿಸುತ್ತಾಳೆ. ಆ ಸಮಯದಲ್ಲಿ ಮರಳಿ ಬಂದ ಶಿವನನ್ನು ಬಾಲಕನು ತಡೆಯುತ್ತಾನೆ. ಇದರಿಂದ ಕೋಪಗೊಂಡ ಶಿವನು ಬಾಲಕನ ಶಿರಚ್ಛೇದ ಮಾಡುತ್ತಾನೆ. ಸ್ನಾನ ಮುಗಿಸಿ ಬಂದ ಪಾರ್ವತಿಯು ಮಗನ ಸ್ಥಿತಿಯನ್ನು ಕಂಡು ಉಗ್ರರೂಪ ತಾಳಿ ಮಹಾಕಾಳಿಯಾಗುತ್ತಾಳೆ.
ದೇವಿಯನ್ನು ಶಾಂತಗೊಳಿಸಲು, ಶಿವನು ತನ್ನ ಗಣಗಳಿಗೆ ಉತ್ತರ ದಿಕ್ಕಿಗೆ ಮುಖಮಾಡಿ ಮಲಗಿರುವ ಜೀವಿಯ ತಲೆಯನ್ನು ತರಲು ಆಜ್ಞಾಪಿಸುತ್ತಾನೆ. ಗಣಗಳು ತಂದ ಆನೆಯ ಮರಿಯ ತಲೆಯನ್ನು ಬಾಲಕನ ದೇಹಕ್ಕೆ ಜೋಡಿಸಿ ಜೀವ ನೀಡಲಾಗುತ್ತದೆ. ಶಿವನು ಆ ಬಾಲಕನಿಗೆ "ಗಣಪತಿ" (ಗಣಗಳ ಅಧಿಪತಿ) ಎಂದು ಹೆಸರಿಟ್ಟು, ಯಾವುದೇ ಶುಭ ಕಾರ್ಯ ಅಥವಾ ಪೂಜೆಯ ಆರಂಭದಲ್ಲಿ ಪ್ರಥಮ ಪೂಜೆ ಸಲ್ಲಲಿ ಎಂದು ವರ ನೀಡುತ್ತಾನೆ.
*ಅಪೂರ್ವ ಲೇಖಕ ಏಕದಂತ*
ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ಮನಸ್ಸಿನಲ್ಲಿ ರಚಿಸಿಕೊಂಡು, ಅದನ್ನು ಬರೆಯಲು ಬ್ರಹ್ಮದೇವನ ಸಲಹೆಯಂತೆ ಗಣೇಶನನ್ನು ಪ್ರಾರ್ಥಿಸಿದರು. ಗಣೇಶನು ಕಥೆ ಬರೆಯಲು ಒಂದು ಷರತ್ತು ವಿಧಿಸಿದನು: "ನಾನು ಬರೆಯಲು ಪ್ರಾರಂಭಿಸಿದ ಮೇಲೆ ನಿರಂತರವಾಗಿ ಕಥೆ ಹೇಳುತ್ತಿರಬೇಕು; ಎಲ್ಲಾದರೂ ನಿಂತರೆ ಬರೆಯುವುದನ್ನು ಅಲ್ಲಿಗೆ ನಿಲ್ಲಿಸುತ್ತೇನೆ." ಅದಕ್ಕೆ ಪ್ರತಿಯಾಗಿ ವ್ಯಾಸರು, "ಪ್ರತಿಯೊಂದು ಶ್ಲೋಕದ ಅರ್ಥವನ್ನು ಸಂಪೂರ್ಣವಾಗಿ ಗ್ರಹಿಸಿದ ನಂತರವೇ ಬರೆಯಬೇಕು" ಎಂಬ ಷರತ್ತನ್ನಿಟ್ಟರು.
ಬರಹದ ವೇಗದಲ್ಲಿ ಗಣೇಶನ ಲೇಖನಿ ಮುರಿದಾಗ, ಷರತ್ತಿನಂತೆ ಬರೆಯುವುದನ್ನು ನಿಲ್ಲಿಸದೇ ತನ್ನ ಒಂದು ದಂತವನ್ನೇ ಮುರಿದು ಲೇಖನಿಯನ್ನಾಗಿ ಬಳಸಿದನು. ಹೀಗಾಗಿ ಆತನಿಗೆ "ಏಕದಂತ" ಎಂಬ ಹೆಸರು ಬಂತು. ಶ್ರೀ ಕೃಷ್ಣನು ಭಗವದ್ಗೀತೆಯ ಜ್ಞಾನದಾತ ('ಬೋಧಕ') ಆದರೆ, ವೇದವ್ಯಾಸರು ಮಾಧ್ಯಮ ('ಪ್ರೇಷಕ') ಹಾಗೂ ಗಣೇಶನು ಅದನ್ನು ಪ್ರಪಂಚಕ್ಕೆ ಅಕ್ಷರರೂಪದಲ್ಲಿ ನೀಡಿದ 'ಪ್ರಥಮ ಲೇಖಕ'.
*ರಾಮಾಯಣದಲ್ಲೂ ಗಣೇಶನ ಲೀಲೆ*
ರಾವಣನು ಶಿವನಿಂದ ಆತ್ಮಲಿಂಗವನ್ನು ಪಡೆದು ಲಂಕೆಗೆ ತೆಗೆದುಕೊಂಡು ಹೋಗುವಾಗ, ದೇವತೆಗಳ ವಿನಂತಿಯ ಮೇರೆಗೆ ಗಣೇಶನು ಬಾಲಬ್ರಾಹ್ಮಣನ ವೇಷದಲ್ಲಿ ಬೃಗು ಕ್ಷೇತ್ರದಲ್ಲಿ ಪ್ರತ್ಯಕ್ಷನಾಗುತ್ತಾನೆ. ರಾವಣನು ಸಂಧ್ಯಾಪೂಜೆ ಮಾಡಲು ಲಿಂಗವನ್ನು ಗಣೇಶನ ಕೈಯಲ್ಲಿಟ್ಟು, ಅದನ್ನು ನೆಲದ ಮೇಲಿಡದಂತೆ ಕೋರುತ್ತಾನೆ. ಗಣೇಶನು ಮೂರು ಬಾರಿ ಕೂಗಿ, ರಾವಣ ಬಾರದಿದ್ದಾಗ ಆತ್ಮಲಿಂಗವನ್ನು ನೆಲದ ಮೇಲಿಡುತ್ತಾನೆ. ರಾವಣ ಎಷ್ಟೇ ಪ್ರಯತ್ನಿಸಿದರೂ ಲಿಂಗವನ್ನು ಎತ್ತಲಾಗುವುದಿಲ್ಲ. ಅದೇ ಇಂದಿನ ಗೋಕರ್ಣ ಕ್ಷೇತ್ರ. ಹೀಗೆ ಗಣೇಶನು ಶ್ರೀರಾಮನ ವಿಜಯಕ್ಕೂ ಪರೋಕ್ಷವಾಗಿ ನೆರವಾದನು.
*ಋಗ್ವೇದದ ಗಣಪತಿ ಮಂತ್ರ:*
ಗಣಾನಾಂ ತ್ವಾ ಗಣಪತಿಂ ಹವಾಮಹೇ
ಕವಿಂ ಕವೀನಾಮುಪಮಶ್ರವಸ್ತಮಮ್ |
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆ ನಃ ಶೃಣ್ವನ್ನೋತಿಭಿಃ ಸೀದ ಸಾಧನಮ್ ||

ಭಾವಾರ್ಥ: ಎಲ್ಲಾ ಗಣಗಳಿಗೆ ಅಧಿಪತಿಯಾದ, ಜ್ಞಾನಿಗಳಲ್ಲಿ ಶ್ರೇಷ್ಠ ಜ್ಞಾನಿಯಾದ, ಅಪ್ರತಿಮ ಕೀರ್ತಿಶಾಲಿ ಹಾಗೂ ಮಂತ್ರಗಳ ರಾಜನಾದ ಎ ಪ್ರಭುವೇ (ಬ್ರಹ್ಮಣಸ್ಪತಿ/ಗಣಪತಿ), ನಮ್ಮ ಪ್ರಾರ್ಥನೆಯನ್ನು ಆಲಿಸಿ; ನಿನ್ನ ರಕ್ಷಣೆ ಮತ್ತು ಆಶೀರ್ವಾದದೊಂದಿಗೆ ಈ ಪೂಜಾಸದನದಲ್ಲಿ ಬಂದು ವಿರಾಜಮಾನನಾಗು. ಲೇಖಕ: ತುಳಸಿರಾಮ್.




