ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ಇಂದು ಹಿರಿಯ ನಟಿಯರಾದ ತಾರಾ, ಮಾಳವಿಕಾ ಅವಿನಾಶ್, ನಟ ಅವಿನಾಶ್ ಹಾಗೂ ಹಲವು ಸಾಹಿತಿಗಳು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ನಟ-ನಟಿಯರ ಬೆಂಬಲ: "ಮಹಿಳೆಯರು ಬೀದಿಗಿಳಿದು ಹೋರಾಡುವ ಪರಿಸ್ಥಿತಿ ತಂದಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆಶಾಗಳಿಗೆ ಕಾರ್ಮಿಕ ಸ್ಥಾನಮಾನ ಹಾಗೂ ಸೇವಾ ಭದ್ರತೆ ನೀಡಬೇಕು" ಎಂದು ನಟಿ ತಾರಾ ಆಗ್ರಹಿಸಿದರು. ಮಾಸಿಕ 15,000 ಗೌರವಧನ ನೀಡುವಂತೆ ಒತ್ತಾಯಿಸಿದ ನಟಿ ಮಾಳವಿಕಾ ಅವಿನಾಶ್, ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರುವ ಭರವಸೆ ನೀಡಿದರು. ಕೋವಿಡ್ ವೇಳೆ ಆಶಾಗಳು ಸಲ್ಲಿಸಿದ ಸೇವೆಯನ್ನು ನಟ ಅವಿನಾಶ್ ಶ್ಲಾಘಿಸಿದರು.
ಸಚಿವರ ಹೇಳಿಕೆಗೆ ತಿರುಗೇಟು: "ಆಶಾ ಕಾರ್ಯಕರ್ತೆಯರಿಗೆ ಕೇಳಿದಾಗೆಲ್ಲ ಕಂಠಿಹಾರ ಕೊಡೋಕಾಗುತ್ತಾ?" ಎಂಬ ಸಚಿವ ನರೇಂದ್ರಸ್ವಾಮಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. "ಹಾರ ಕೊಡಲು ನೀವೇನು ರಾಜರಲ್ಲ, ನಿಮ್ಮನ್ನು ಅಧಿಕಾರಕ್ಕೆ ತಂದವರು ನಾವು" ಎಂದು ತಾರಾ ತಿರುಗೇಟು ನೀಡಿದರೆ, "ನಾವು ಹಾರ ಕೇಳಿಲ್ಲ, ದುಡಿತಕ್ಕೆ ತಕ್ಕ ಪ್ರತಿಫಲ ಕೇಳುತ್ತಿದ್ದೇವೆ" ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಕಿಡಿಕಾರಿದರು.
ಸಾಹಿತಿಗಳ ಒತ್ತಾಯ: ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಡಾ. ವಸುಂಧರಾ ಭೂಪತಿ, ಪ್ರೊ. ಚಂದ್ರಶೇಖರ್ ತಾಳ್ಯ ಹಾಗೂ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿಗಳು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.




