ಚಂದ್ರವಳ್ಳಿ ನ್ಯೂಸ್, ಕಠ್ಮಂಡು (ನೇಪಾಳ):
ಮಧ್ಯ ನೇಪಾಳದ ಎರಡು ಜಿಲ್ಲೆಗಳಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಭೀಕರ ಪ್ರವಾಹದ ರಭಸಕ್ಕೆ ನದಿ ತೀರದ ಪ್ರದೇಶಗಳು ಕೊಚ್ಚಿ ಹೋಗಿದ್ದು, ಹೆಚ್ಚಿನ ಆಸ್ತಿ-ಪಾಸ್ತಿ ಪ್ರಾಣ ಹಾನಿಯಾಗಿದೆ. ಅಲ್ಲದೇ ಇದರಿಂದ 12ಕ್ಕೂ ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದೆ.
ಕಠ್ಮುಂಡುವಿನಿಂದ ಈಶಾನ್ಯಕ್ಕೆ ಸುಮಾರು 125ಕಿಲೋಮೀಟರ್ ದೂರದಲ್ಲಿರುವ ಟಿಬೆಟ್ ಗಡಿ ಸಮೀಪವಿರುವ ರಸುವಾ ಪ್ರದೇಶ ಪ್ರವಾಹ ಹೆಚ್ಚು ಬಾಧಿತವಾಗಿದೆ. ರಸುವಾ ಜಿಲ್ಲೆಯ ತಿಮುರೆ ಮತ್ತು ಸಮೀಪದ ಸ್ಯಾಫ್ರುಬೆಸಿ ಪ್ರದೇಶದಲ್ಲಿ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಾಹನಗಳು, ಸರಕುಗಳು ಮತ್ತು ಇತರೆ ಆಸ್ತಿಪಾಸ್ತಿಗಳು ಕೊಚ್ಚಿಹೋಗಿವೆ ಎಂದು ನೇಪಾಳ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಹಠಾತ್ ಪ್ರವಾಹದ ನಂತರ ನುವಾಕೋಟ್ ಜಿಲ್ಲೆಯ ಬಿದುರ್ ಪುರಸಭೆ ವ್ಯಾಪ್ತಿಯಲ್ಲಿ ಮೂವರು ಪುರುಷರು ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಬಾಗ್ಮತಿ ಪ್ರಾಂತ್ಯದ ಪೊಲೀಸ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ರಸುವಾ ಪ್ರದೇಶದಲ್ಲಿ ಉಂಟಾದ ಮಳೆಯಿಂದಾಗಿ ಈ ಪ್ರವಾಹ ಉಂಟಾಗಿಲ್ಲ. ಬದಲಿಗೆ ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದಾಗಿ ಇದು ಸಂಭವಿಸಿದೆ. ಆದ್ರೆ, ನಿಖರ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದ ಬೆನ್ನಲ್ಲೇ ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಸೇರಿದಂತೆ ನದಿಯ ಕೆಳಭಾಗದ ಹಲವು ಜಿಲ್ಲೆಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ. ನೇಪಾಳ ಸೇನೆಯ ನೆರವಿನೊಂದಿಗೆ ಅಧಿಕಾರಿಗಳು ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಹೇಳಿಕೆ ಪ್ರಕಾರ ರಸುವಾ, ನುವಾಕೋಟ್, ಧಾಡಿಂಗ್, ಚಿತ್ವಾನ್ ಮತ್ತು ಗೋಖಾ ಜಿಲ್ಲೆಗಳ ನದಿ ತೀರ ಪ್ರದೇಶದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದಿರುವಂತೆ ಹಾಗೂ ಮುಂದಿನ ಸೂಚನೆ ಬರುವವರೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಲಾಗಿದೆ.
ಹೊಸ ಹಿಮನದಿ ರೂಪುಗೊಂಡಿದ್ದರಿಂದ ಅಥವಾ ಹಳೆಯ ಹಿಮನದಿ ಒಡೆದಿದ್ದರಿಂದ ಈ ದುರಂತ ಸಂಭವಿಸಿರಬಹುದು. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ನಿಖರ ಕಾರಣ ಪತ್ತೆಯಾಗಿಲ್ಲ. ಟಿಬೆಟ್ ಕಡೆಯಿಂದ ಪ್ರವಾಹದ ಅಪಾಯ ಇರುವ ಹಿನ್ನೆಲೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ರಸುವಾ ಮುಖ್ಯ ಕಸ್ಟಮ್ಸ್ ಅಧಿಕಾರಿ ರಾಜೇಂದ್ರ ಧುಂಗಾನಾ ಮಾತನಾಡಿ, ಪ್ರವಾಹಕ್ಕೆ ಎರಡು ಮನೆಗು ಹಾನಿಯಾಗಿದ್ದು, ಕಸ್ಟಮ್ಸ್ ಆವರಣದಲ್ಲಿದ್ದ ಹಲವಾರು ವಾಹನಗಳು ಮತ್ತು ಸರಕುಗಳು ಕೊಚ್ಚಿಹೋಗಿವೆ. ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ಸೇತುವೆಯೊಂದು ಕೂಡ ನಾಶವಾಗಿದೆ.
ಹಠಾತ್ ಪ್ರವಾಹವು ನುವಾಕೋಟ್ ಮತ್ತು ರಸುವಾ ಜಿಲ್ಲೆಗಳಲ್ಲಿರುವ ಒಟ್ಟು 354 ಮೆಗಾವ್ಯಾಟ್ ಸಾಮರ್ಥ್ಯದ ಎಂಟು ಜಲವಿದ್ಯುತ್ ಯೋಜನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ಐದು ಯೋಜನೆ ಹಾನಿಗೊಂದಿದೆ ಎಂದು ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ನೇಪಾಳ ವರದಿ ಮಾಡಿದೆ.
ಹಠಾತ್ ಪ್ರವಾಹ ಬೆನ್ನಲ್ಲೇ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನ ಮಂತ್ರಿ ಬಲೇಂದ್ರ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯ ನಂತರ, ಸಂತ್ರಸ್ತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.



