ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಚಿತ್ರದುರ್ಗ ತಾಲ್ಲೂಕಿನ ಕೊಗುಂಡೆ ಗ್ರಾಮದ ಹಿರಿಯ ಸಹಕಾರ ಧುರೀಣರಾದ ಎಚ್.ಎಂ. ಮಂಜುನಾಥಪ್ಪ ಅವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸುದೀರ್ಘಕಾಲದ ಗಣನೀಯ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ, ರಾಜ್ಯ ಸರ್ಕಾರದ ಸಹಕಾರ ಇಲಾಖೆಯು ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಚಿತ್ರದುರ್ಗದ ತಾಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ (ಟಿ.ಎ.ಪಿ.ಸಿ.ಎಂ.ಎಸ್. ಲಿ.) ಸಂಸ್ಥೆಯ ಅಧ್ಯಕ್ಷರಾಗಿ ಕಳೆದ 30 ವರ್ಷಗಳ ಅವಧಿಯಲ್ಲಿ ಸುಮಾರು 22 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಇವರು, ತಾಲೂಕು ಮಟ್ಟದ ಈ ಸಹಕಾರ ಸಂಸ್ಥೆಯನ್ನು ರಾಜ್ಯದಲ್ಲಿಯೇ ಪ್ರತಿಷ್ಠಿತ ಹಾಗೂ ಮಾದರಿ ಸಹಕಾರಿ ಸಂಸ್ಥೆಯನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಕೆ.ಎಸ್.ಸಿ.ಎಂ.ಎಫ್. ಲಿ.) ಇದರ ರಾಜ್ಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವ ಇವರು, ಭಾರತ ಸರ್ಕಾರದ ಸಹಕಾರ ವಲಯದ ಪ್ರಮುಖ ಸಂಸ್ಥೆಯಾದ ಇಫ್ಕೋ (IFFCO – Indian Farmers Fertiliser Cooperative Limited) ಇದರ ಆರ್ಜಿಬಿ (RGB) ಸದಸ್ಯರಾಗಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಚಿತ್ರದುರ್ಗ ತಾಲ್ಲೂಕಿನ ಬಹದ್ದೂರ್ಘಟ್ಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರಾಗಿ ವಿವಿಧ ಹಂತಗಳಲ್ಲಿ ಸಹಕಾರ ಚಳವಳಿಯ ಬೆಳವಣಿಗೆಗೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ.
ಸಹಕಾರ ಕ್ಷೇತ್ರದ ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ರೈತರು ಹಾಗೂ ಸಹಕಾರ ಸಂಸ್ಥೆಗಳ ಹಿತಾಸಕ್ತಿಗಾಗಿ ನಿರಂತರವಾಗಿ ಶ್ರಮಿಸಿರುವ ಇವರ ಸೇವೆಯನ್ನು ಪರಿಗಣಿಸಿ, ದಿನಾಂಕ 14.11.2026ರಂದು ಬೆಂಗಳೂರಿನಲ್ಲಿ ನಡೆಯಲಿರುವ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಂದರ್ಭದಲ್ಲಿ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇವರಿಗೆ ದೊರೆತಿರುವ ಈ ಗೌರವವು ಕೇವಲ ವೈಯಕ್ತಿಕ ಸಾಧನೆಯ ಪ್ರತೀಕವಷ್ಟೇ ಅಲ್ಲದೆ, ಚಿತ್ರದುರ್ಗ ಜಿಲ್ಲೆಯ ಸಹಕಾರ ಕ್ಷೇತ್ರದ ಹೆಗ್ಗಳಿಕೆಯೂ ಆಗಿದೆ.
ಈ ಗಣ್ಯ ಗೌರವಕ್ಕೆ ಪಾತ್ರರಾಗಿರುವ ಎಚ್.ಎಂ. ಮಂಜುನಾಥಪ್ಪ ಅವರಿಗೆ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




