ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ವಿದೇಶದಲ್ಲಿ 770 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಗೋಕಾಕ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ 25,000 ರೂ.ಗಳ ಅಲ್ಪ ಮೊತ್ತದ ಹೂಡಿಕೆಗೆ ಸಂಬಂಧಿಸಿದಂತೆ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ರಾಜಕಾರಣದಲ್ಲಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಜಾರಕಿಹೊಳಿ 25 ಸಾವಿರ ರೂ., ಪ್ರಿಯಾಂಕಾ ಜಾರಕಿಹೊಳಿ 25 ಸಾವಿರ ರೂ. ಹಾಗೂ ಸಹೋದರಿ ಮಹಾದೇವಿ ಅವರು 25 ಸಾವಿರ ರೂ. ಮಾತ್ರ ಹೂಡಿಕೆ ಮಾಡಿದ್ದು, ಇಂತಹ ಸಣ್ಣ ವಿಷಯಕ್ಕೆ ಇ.ಡಿ ದಾಳಿ ನಡೆಸಿರುವುದು ನಮಗೂ ಆಶ್ಚರ್ಯ ತಂದಿದೆ ಎಂದರು.
1.73 ಕೋಟಿ ರೂ. ಹಣ ಜಪ್ತಿ ಬಗ್ಗೆ ಸ್ಪಷ್ಟನೆ:
ಗೋಕಾಕ್‌ನಲ್ಲಿರುವ ನಿವಾಸದಲ್ಲಿ ಒಟ್ಟು 1.73 ಕೋಟಿ ರೂ. ನಗದು ಹಣ ಪತ್ತೆಯಾಗಿದ್ದು ಸತ್ಯ. ಅಧಿಕಾರಿಗಳು ಎರಡು ಟ್ರಂಕ್‌ಗಳನ್ನು ತಂದಿದ್ದರೂ, ಕೇವಲ ಒಂದೇ ಟ್ರಂಕ್‌ನಲ್ಲಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬೇರೆಡೆ ಹಣ ಸೀಜ್ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ವಶಪಡಿಸಿಕೊಂಡಿರುವ 1.73 ಕೋಟಿ ರೂ. ಹಣಕ್ಕೆ ಸರಿಯಾದ ಲೆಕ್ಕಪತ್ರವಿದ್ದು, ಸೂಕ್ತ ದಾಖಲೆಗಳನ್ನು ನೀಡಿ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.




