ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಸ್ಥಳೀಯ ಅಭ್ಯರ್ಥಿ ಜೆ. ರಾಜು ಬೇತೂರು ಪಾಳ್ಯ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಮುಖಂಡರ ಭೇಟಿ ಮತ್ತು ಬೆಂಬಲ ಕೋರಿಕೆ: ಈ ನಿಟ್ಟಿನಲ್ಲಿ ಜೆಡಿಎಸ್ ನಾಯಕ ಕುಮಾರಣ್ಣ (ಎಚ್.ಡಿ. ಕುಮಾರಸ್ವಾಮಿ) ಅವರನ್ನು ಬೇತೂರು ಪಾಳ್ಯ ರಾಜು ಅವರು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಶಾಸಕ ಕೆ.ಎಸ್ ನವೀನ್, ಮೂಡ್ಲಗಿರಿಪ್ಪ, ರವೀಂದ್ರಪ್ಪ ಸೇರಿದಂತೆ ಪ್ರಮುಖ ರಾಜಕೀಯ ನಾಯಕರನ್ನು ಭೇಟಿ ಮಾಡಿ ಚುನಾವಣಾ ಚರ್ಚೆ ನಡೆಸಿ, ಸ್ಪರ್ಧೆಗೆ ಬೆಂಬಲ ಹಾಗೂ ಸಹಕಾರ ನೀಡುವಂತೆ ರಾಜು ಅವರು ಮನವಿ ಮಾಡಿದ್ದಾರೆ.
ಸ್ಥಳೀಯರ ಪರ ಧ್ವನಿ: ಹಿರಿಯೂರು ಕ್ಷೇತ್ರದಲ್ಲಿ ಸ್ಥಳೀಯವಾಗಿ ಬೆಳೆದು ಬಂದ ಸ್ಥಳೀಯ ನಾಯಕರಿಗೆ (ಲೋಕಲ್ ರಾಜು) ಅವಕಾಶ ಸಿಗಬೇಕು ಎಂದು ಚರ್ಚಿಸಲಾಗಿದೆ ಎಂದು ರಾಜು ತಿಳಿಸಿದರು.
ಹಿರಿಯೂರು ಉಪಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಹಾಗೂ ಸಮುದಾಯವಾರು ಲೆಕ್ಕಾಚಾರಗಳು ಬಿರುಸುಗೊಂಡಿವೆ. ಈ ಹಿನ್ನೆಲೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಜೆ.ರಾಜು ಬೇತೂರು ಪಾಳ್ಯ ಆದ ನನಗೆ ಟಿಕೆಟ್ ನೀಡಿದರೆ ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಿದಂತಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ರಾಜು ಅಭಿಪ್ರಾಯಪಟ್ಟಿದ್ದಾರೆ.




