ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಮದ್ಯದ ದರ ನೀತಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಪ್ರಸ್ತಾಪಿತ 'ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು 2026' ಕ್ಕೆ ಸಾರ್ವಜನಿಕರಿಂದ ಮುಕ್ತ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಮದ್ಯದ ಬೆಲೆ ನಿರ್ಧಾರ ಎನ್ನುವುದು ಕೇವಲ ಸರ್ಕಾರದ ಆದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಸಾರ್ವಜನಿಕ ಆರೋಗ್ಯ, ರಸ್ತೆ ಸುರಕ್ಷತೆ, ಕುಟುಂಬಗಳ ಯೋಗಕ್ಷೇಮ ಮತ್ತು ಜವಾಬ್ದಾರಿಯುತ ನಿಯಂತ್ರಣಕ್ಕೂ ಸಂಬಂಧಿಸಿದ್ದಾಗಿದೆ" ಎಂದು ತಿಳಿಸಿದ್ದಾರೆ.
ಸ್ಥಿರ ಆದಾಯ ಮತ್ತು ಸಮತೋಲನ: ರಾಜ್ಯದ ಆದಾಯಕ್ಕೆ ಧಕ್ಕೆಯಾಗದಂತೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು.
ಸುಲಭ ಪರವಾನಗಿ: ಮದ್ಯದ ಪರವಾನಗಿ (ಲೈಸೆನ್ಸ್) ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವುದು.
ಬಲವಾದ ಕಾವಲು: ಉತ್ತಮ ಟ್ರ್ಯಾಕಿಂಗ್ ವ್ಯವಸ್ಥೆಯ ಮೂಲಕ ಮದ್ಯ ಮಾರಾಟದ ಮೇಲೆ ತೀವ್ರ ನಿಗಾ ಇಡುವುದು ಮತ್ತು ನಿಯಂತ್ರಣವನ್ನು ಬಲಪಡಿಸುವುದು.
ಸಾರ್ವಜನಿಕರಿಗೆ ಸಿಎಂ ಕೇಳಿದ ಪ್ರಶ್ನೆಗಳು:
ಸರ್ಕಾರದ ಆದಾಯ ಮುಖ್ಯವೋ, ಸಾರ್ವಜನಿಕ ಆರೋಗ್ಯ ಮುಖ್ಯವೋ ಅಥವಾ ಎರಡೂ ಸಮನಾಗಿರಬೇಕೋ?
ಪ್ರಸ್ತಾಪಿತ ಈ ಹೊಸ ಸುಧಾರಣಾ ನೀತಿಯು ಸರಿಯಾದ ಸಮತೋಲನವನ್ನು ಹೊಂದಿದೆಯೇ?
ಅಭಿಪ್ರಾಯ ತಿಳಿಸಲು ಮೇ 22 ಕೊನೆಯ ದಿನ:
ಈ ಸುಧಾರಣೆಯ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮೇ 22, 2026 ರವರೆಗೆ ಕಾಲಾವಕಾಶ ನೀಡಲಾಗಿದೆ. ನಾಗರಿಕರು ಕೆಳಗಿನ ವಿಧಾನಗಳ ಮೂಲಕ ತಮ್ಮ ಪ್ರತಿಕ್ರಿಯೆ ದಾಖಲಿಸಬಹುದು:
ವೆಬ್‌ಸೈಟ್ ಲಿಂಕ್: civis.vote/consultations ಮೂಲಕ ನೇರವಾಗಿ ಪ್ರತಿಕ್ರಿಯಿಸಬಹುದು.
ವಾಟ್ಸಾಪ್ (WhatsApp) ಮೂಲಕ: ನಿಮ್ಮ ಅಭಿಪ್ರಾಯಗಳನ್ನು (ಧ್ವನಿ ಸಂದೇಶ - Voice Notes ಸೇರಿದಂತೆ ಯಾವುದೇ ಭಾಷೆಯಲ್ಲಿ) ಕಳುಹಿಸಲು +91 8976926914 ಸಂಖ್ಯೆಗೆ “karnatakaexcise” ಎಂದು ಸಂದೇಶ ಕಳುಹಿಸಬಹುದು. ಅಥವಾ ನೇರವಾಗಿ wa.link/uv7q49 ಲಿಂಕ್ ಬಳಸಬಹುದು.
ರಾಜ್ಯದ ಪ್ರತಿಯೊಬ್ಬ ನಾಗರಿಕನೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕೆ ತಮ್ಮ ಸಲಹೆಗಳನ್ನು ನೀಡುವಂತೆ ಸರ್ಕಾರ ಕೋರಿದೆ.


