ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಹೂಡಿಕೆ ಆಕರ್ಷಿಸಲು ಮತ್ತು ಹೊಸ ಉದ್ಯೋಗ ಸೃಷ್ಟಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಸರ್ಕಾರ ಸಂಪೂರ್ಣ ನಿರಾಸಕ್ತಿ ತಳೆದಿದೆ ಎಂದು ಜನತಾದಳ (ಜಾತ್ಯತೀತ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ಭ್ರಷ್ಟಾಚಾರ ಮತ್ತು ಉದಾಸೀನತೆಯಿಂದಾಗಿ ದೊಡ್ಡ ದೊಡ್ಡ ಕಂಪನಿಗಳು ಕರ್ನಾಟಕವನ್ನು ತೊರೆದು ಪಕ್ಕದ ಆಂಧ್ರಪ್ರದೇಶ ಹಾಗೂ ತಮಿಳುನಾಡಿನತ್ತ ಮುಖ ಮಾಡುತ್ತಿವೆ ಎಂದು ಜೆಡಿಎಸ್‌ಗಂಭೀರ ಆರೋಪ ಮಾಡಿದೆ.
ದಶಕಗಳ ಕಾಲ ಭಾರತದ ‘ಏರೋಸ್ಪೇಸ್ ರಾಜಧಾನಿ’ಯಾಗಿ ಮೆರೆದಿದ್ದ ಬೆಂಗಳೂರು, ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದಾಗಿ ಸದ್ದಿಲ್ಲದೆ ತನ್ನ ಕಿರೀಟವನ್ನು ಕಳೆದುಕೊಳ್ಳುತ್ತಿರುವುದು ಕನ್ನಡಿಗರ ಪಾಲಿನ ದೊಡ್ಡ ದುರಂತ ಎಂದು ಪಕ್ಷ ಕಳವಳ ವ್ಯಕ್ತಪಡಿಸಿದೆ.
ಪಕ್ಕದ ರಾಜ್ಯಗಳ ಪಾಲಾದ ಬೃಹತ್ ಯೋಜನೆಗಳು:
ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಉದ್ಯಮ ಸ್ನೇಹಿ ವಾತಾವರಣದ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳವನ್ನು ಸೆಳೆಯುತ್ತಿದ್ದರೆ, ಕರ್ನಾಟಕ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ಜೆಡಿಎಸ್‌ಅಂಕಿ-ಅಂಶಗಳ ಸಹಿತ ವಾಗ್ದಾಳಿ ನಡೆಸಿದೆ:
ತಮಿಳುನಾಡು (ರೋಲ್ಸ್ ರಾಯ್ಸ್ - ಎಚ್‌ಎಎಲ್ ಯೋಜನೆ): ವಾರದ ಹಿಂದಷ್ಟೇ ಪ್ರಖ್ಯಾತ ರೋಲ್ಸ್ ರಾಯ್ಸ್ ಮತ್ತು ಎಚ್‌ಎಎಲ್ ಸಂಸ್ಥೆಗಳ ಜಂಟಿ ಉದ್ಯಮವಾದ ‘ಇಂಟರ್ನ್ಯಾಷನಲ್ ಏರೋಸ್ಪೇಸ್ ಮ್ಯಾನುಫಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್’ ತಮಿಳುನಾಡಿನ ಹೊಸೂರಿನಲ್ಲಿ 12 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಏರೋ ಸ್ಪೇಸ್‌ಇಂಜಿನ್‌ಘಟಕವನ್ನು ಆರಂಭಿಸಿದೆ. ಇದಕ್ಕಾಗಿ ಅಂದಾಜು 320 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ಆಂಧ್ರಪ್ರದೇಶ (AMCA ಸ್ಟೆಲ್ತ್ ಯುದ್ಧ ವಿಮಾನ ಯೋಜನೆ): ಭಾರತದ ಹೆಮ್ಮೆಯ 5ನೇ ತಲೆಮಾರಿನ ‘ಅಡ್ವಾನ್ಸ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್’ (AMCA) ಸ್ಟೈಲ್ತ್ ಯುದ್ಧ ವಿಮಾನದ ಜೋಡಣಾ ಘಟಕ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಸ್ಥಾಪನೆಯಾಗುತ್ತಿದೆ. ಇದಕ್ಕಾಗಿ ಆಂಧ್ರ ಸರ್ಕಾರ ಡಿಆರ್‌ಡಿಒಗೆ (DRDO) 600 ಎಕರೆ ಭೂಮಿಯನ್ನು ಉಚಿತವಾಗಿ ನೀಡಿದ್ದು, ಒಟ್ಟು 1 ಲಕ್ಷ ಕೋಟಿ ರೂ. ಭಾರಿ ಹೂಡಿಕೆ ಹರಿದುಬರುತ್ತಿದೆ.
ಕುರ್ಚಿ ಕಚ್ಚಾಟ, ಕಮಿಷನ್ ದಂಧೆಯಲ್ಲಿ ಮುಳುಗಿದ ಸರ್ಕಾರ:
"ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಕುರ್ಚಿ ಕಚ್ಚಾಟ, ಸರಣಿ ಹಗರಣಗಳು, ಕಮಿಷನ್‌ವಸೂಲಿ, ಬೆಲೆ ಏರಿಕೆ, ತೆರಿಗೆ ಹೆಚ್ಚಳ ಮತ್ತು ಓಟ್ ಬ್ಯಾಂಕ್ ರಾಜಕಾರಣದಲ್ಲೇ ಕಾಂಗ್ರೆಸ್‌ಸಂಪೂರ್ಣ ಕಾಲಹರಣ ಮಾಡುತ್ತಿದೆ."
ಜೆಡಿಎಸ್.
ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಪೂರಕವಾದ ವಾತಾವರಣವೇ ಇಲ್ಲದಂತಾಗಿದೆ. ಸಿದ್ದರಾಮಯ್ಯ ಸಂಪುಟದ ಮಂತ್ರಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ರಾಜಕೀಯ ಕಿತ್ತಾಟಗಳಿಂದಾಗಿ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿಲ್ಲ. ಪರಿಣಾಮವಾಗಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಕೈತಪ್ಪುತ್ತಿವೆ ಎಂದು ಜೆಡಿಎಸ್ ದೂರಿದೆ.
ಮೂಲಸೌಕರ್ಯದ ಕೊರತೆಯಿಂದ ಹರಾಜಾಗುತ್ತಿದೆ ರಾಜ್ಯದ ಮಾನ:ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೂಲಸೌಕರ್ಯಗಳು ಸಂಪೂರ್ಣ ಕುಸಿದುಬಿದ್ದಿವೆ. ರಸ್ತೆ ಗುಂಡಿಗಳು, ವಿಪರೀತ ಟ್ರಾಫಿಕ್‌ಜಾಮ್ ಮತ್ತು ಕಸದ ಸಮಸ್ಯೆಯಿಂದಾಗಿ ರಾಜ್ಯದ ಮಾನ ಹರಾಜಾಗುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಜನಸಾಮಾನ್ಯರ ಹಾಗೂ ಉದ್ಯಮಿಗಳ ಹಿತಾಸಕ್ತಿಯನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ಜೆಡಿಎಸ್ ತನ್ನ ಪ್ರಕಟಣೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.


