ಚಂದ್ರವಳ್ಳಿ ನ್ಯೂಸ್, ರಾಮನಗರ:
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆಯಾಗುವ ಇಂದಿನ ಕಾಲಘಟ್ಟದಲ್ಲಿ, ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಸರಳವಾಗಿ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸಂವಿಧಾನ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಆಶಯದಂತೆ 'ಮಂತ್ರಮಾಂಗಲ್ಯ' ಪದ್ಧತಿಯ ಮೂಲಕ ದರ್ಶನ್ ಧ್ರುವನಾರಾಯಣ್ ಅವರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಮೂಲದ ವೈದ್ಯೆ ಡಾ. ಶ್ರೀನಿಧಿ ಅವರ ಕೈಹಿಡಿದರು.
ಬೆಂಗಳೂರು–ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ರಾಮನಗರದ 'ಜಾನಪದ ಲೋಕ'ದಲ್ಲಿ ಈ ಸರಳ ಹಾಗೂ ಅರ್ಥಪೂರ್ಣ ವಿವಾಹ ಸಮಾರಂಭ ನೆರವೇರಿತು.
ಗಣ್ಯರ ಉಪಸ್ಥಿತಿ, ಶುಭ ಹಾರೈಕೆ: ಶಾಸಕರ ಸರಳ ವಿವಾಹಕ್ಕೆ ರಾಜ್ಯದ ಪ್ರಮುಖ ನಾಯಕರು ಸಾಕ್ಷಿಯಾದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ಮತ್ತು ಕುಟುಂಬದ ಆಪ್ತರು ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.
ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪುತ್ರರಾದ ದರ್ಶನ್ ಮತ್ತು ಡಾ. ಶ್ರೀನಿಧಿ ಕಳೆದ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದು, ಕಳೆದ ನವೆಂಬರ್ 2ರಂದು ಮಂಡ್ಯದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಜಾನಪದ ಲೋಕದಲ್ಲಿ ವಿವಾಹವಾದ ಬಳಿಕ, ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜನಪ್ರತಿನಿಧಿಯಾಗಿದ್ದರೂ ಯಾವುದೇ ಆಡಂಬರವಿಲ್ಲದೆ, ಸರಳತೆಗೆ ಆದ್ಯತೆ ನೀಡಿ ಮಂತ್ರಮಾಂಗಲ್ಯದ ಮೂಲಕ ಹೊಸ ಬದುಕಿಗೆ ಕಾಲಿಟ್ಟ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ಈ ನಡೆಗೆ ರಾಜ್ಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.




