ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ಬೆಳಗಾವಿಯಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಕಚೇರಿಗೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಕುಟುಂಬ ಸಮೇತ ಭೇಟಿ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳ ನಿವಾಸದಲ್ಲಿ ಸೌಹಾರ್ದಯುತ ವಾತಾವರಣದಲ್ಲಿ ನಡೆದ ಈ ದಿಢೀರ್ ಭೇಟಿ ಹಾಗೂ ಸುದೀರ್ಘ ಮಾತುಕತೆ ಪ್ರಸ್ತುತ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಮುಂಜಾನೆಯೇ ಸಿಎಂ ಕಚೇರಿಗೆ ಲಗ್ಗೆ ಇಟ್ಟ ಕುಟುಂಬ!:
ವಿಶೇಷವೆಂದರೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಲಕ್ಷ್ಮೀ ಹೆಬ್ಬಾಳ್ಕರ್ ಇಡೀ ಕುಟುಂಬದೊಂದಿಗೆ ಆಗಮಿಸಿದ್ದರು. ಒಂದು ವಾಹನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಮೊದಲೇ ಆಗಮಿಸಿದ್ದರೆ, ಮತ್ತೊಂದು ವಾಹನದಲ್ಲಿ ಅವರ ತಾಯಿ ಗಿರಿಜಾ ಹಟ್ಟಿಹೊಳಿ ಹಾಗೂ ಇಬ್ಬರು ಸಹೋದರಿಯರು ಸಿಎಂಗೆ ಟಿಫನ್ (ಉಪಹಾರ) ತೆಗೆದುಕೊಂಡು ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ. ಭೇಟಿಯ ವೇಳೆ ಸಿಎಂ ಮತ್ತು ಹೆಬ್ಬಾಳ್ಕರ್ ಕುಟುಂಬಸ್ಥರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮಂತ್ರಿಗಿರಿ ರಹಸ್ಯ ಚರ್ಚೆ?:
ಈ ಮಹತ್ವದ ಸಭೆಯಲ್ಲಿ ಯಾವ ವಿಷಯಗಳ ಕುರಿತು ಚರ್ಚೆ ನಡೆಯಿತು ಎಂಬ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದಾಗ್ಯೂ, ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂಪುಟ ಸೇರ್ಪಡೆ ಹಾಗೂ ತಮಗೆ ಸಿಗಬೇಕಾದ ಪ್ರಾತಿನಿಧ್ಯದ ಕುರಿತಾಗಿಯೇ ಸಿಎಂ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ವಿವಿಧ ಕಾಂಗ್ರೆಸ್ ನಾಯಕರು ಹಾಗೂ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಹಂತದಲ್ಲೇ ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಕುಟುಂಬ ಸಮೇತ ಮುಖ್ಯಮಂತ್ರಿಗಳನ್ನು ಭೇಟಿಯಾಗಿರುವುದು ರಾಜಕೀಯ ಲೆಕ್ಕಾಚಾರಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.



