ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿ (OSD) ಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸಿಎಂ ಅವರ ಈ ದಿಢೀರ್ ನಡೆ ರಾಜಕೀಯ ಮತ್ತು ಅಧಿಕಾರಿಗಳ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಯಾರಿಗೆ ಎಲ್ಲಿಗೆ ಪೋಸ್ಟಿಂಗ್?:
ಡಾ. ವೆಂಕಟೇಶಯ್ಯ (ಆಪ್ತ ಕಾರ್ಯದರ್ಶಿ): ಇವರನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ರಮೇಶ್ ಪಿ. ಕೋನಾರೆಡ್ಡಿ (OSD): ಇವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಇಲಾಖೆಯ ನಿರ್ದೇಶಕರಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ.
ವಿಜಯ್ ಬಿ.ಪಿ ಅವರಿಗೆ ಸ್ಥಳ ನಿಯುಕ್ತಿ ಇಲ್ಲ!:
ಇದೇ ವೇಳೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯ್ ಬಿ.ಪಿ ಅವರನ್ನು ಆ ಸ್ಥಾನದಿಂದ ಮುಕ್ತಗೊಳಿಸಲಾಗಿದೆ. ಸದ್ಯ ಅವರಿಗೆ ಯಾವುದೇ ನಿರ್ದಿಷ್ಟ ಹುದ್ದೆಯನ್ನು ತೋರಿಸದೆ, ಮುಂದಿನ ಸ್ಥಳ ನಿಯುಕ್ತಿಗಾಗಿ (Posting) ಸಂಬಂಧಪಟ್ಟ ಇಲಾಖೆಗೆ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಅಂತಿಮ ಹಂತದಲ್ಲೂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಅಧಿಕಾರಿಗಳ ಭವಿಷ್ಯ ಭದ್ರಪಡಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯ ಅವರ ಮೂರು ವರ್ಷಗಳ ಆಡಳಿತ ಅಂತ್ಯವಾಗುತ್ತಿದ್ದಂತೆ, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ರಾಜಕೀಯ ವಿದ್ಯಮಾನಗಳು ಗರಿಗೆದರಿವೆ.



