ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳಾದ ಮಾಂಗಲ್ಯ ಮತ್ತು ಜನಿವಾರವನ್ನು ತೆಗೆಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ಅಶೋಕ್ ಅವರು ಕಟುವಾಗಿ ಟೀಕಿಸಿದ್ದಾರೆ. "ಕಾಂಗ್ರೆಸ್ ಸರ್ಕಾರವು 'ಆಧುನಿಕ ಮುಸ್ಲಿಂ ಲೀಗ್' ನಂತೆ ವರ್ತಿಸುತ್ತಿದ್ದು, ರಾಜ್ಯದಲ್ಲಿ ಅನಧಿಕೃತವಾಗಿ ಷರಿಯಾ ಕಾನೂನು ಜಾರಿಗೆ ತರುತ್ತಿದೆ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ಹಿನ್ನೆಲೆ: ಕೋರಮಂಗಲದಲ್ಲಿ ಜನಿವಾರ ವಿವಾದ
ಬೆಂಗಳೂರಿನ ಕೋರಮಂಗಲದ ಸಿಇಟಿ (CET) ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದೆ. ಈ ವಿಚಾರವನ್ನು ಪ್ರಸ್ತಾಪಿಸಿರುವ ಅಶೋಕ್, ಕಳೆದ ವರ್ಷ ಕೆಪಿಎಸ್‌ಸಿ ಪರೀಕ್ಷೆಯ ವೇಳೆ ಮಹಿಳೆಯರ ಮಾಂಗಲ್ಯ ತೆಗೆಸಿದ್ದನ್ನು ನೆನಪಿಸುತ್ತಾ, ಸರ್ಕಾರ ತನ್ನ "ಹಿಂದೂ ವಿರೋಧಿ" ಚಾಳಿಯನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದಾರೆ.
ಮಾರ್ಗಸೂಚಿಗಳ ಉಲ್ಲಂಘನೆ: "ಸಿಇಟಿ ಹಾಲ್ ಟಿಕೆಟ್ ಆಗಲಿ ಅಥವಾ ಯಾವುದೇ ಅಧಿಕೃತ ಮಾರ್ಗಸೂಚಿಯಲ್ಲಾಗಲಿ ಜನಿವಾರ ಧರಿಸಬಾರದು ಎಂದು ಉಲ್ಲೇಖವಿಲ್ಲ. ಹೀಗಿದ್ದರೂ ಬಲವಂತವಾಗಿ ತೆಗೆಸುತ್ತಿರುವುದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯ" ಎಂದು ಕಿಡಿಕಾರಿದ್ದಾರೆ.
ದ್ವಂದ್ವ ನೀತಿ: ಹಿಜಾಬ್ ವಿಷಯ ಬಂದಾಗ ಹಕ್ಕುಗಳ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು, ಜನಿವಾರ ಮತ್ತು ಮಾಂಗಲ್ಯದ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ? ನ್ಯಾಯಾಲಯದ ಆದೇಶವಿದ್ದರೂ ಹಿಜಾಬ್ ಪರ ನಿಂತವರು ಈಗ ಹಿಂದೂ ಆಚಾರಗಳನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ತುಷ್ಟೀಕರಣ ರಾಜಕಾರಣ: "ರಂಜಾನ್ ವೇಳೆ ಉರ್ದು ಶಾಲೆಗಳ ಸಮಯ ಬದಲಿಸುವ ಸರ್ಕಾರ, ಪರೀಕ್ಷೆಯ ನೆಪದಲ್ಲಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತಿದೆ. ಇದು ಕೇವಲ ತಪಾಸಣೆಯಲ್ಲ, ಹಿಂದೂ ಧರ್ಮದ ಮೇಲಿನ ವ್ಯವಸ್ಥಿತ ದಾಳಿ" ಎಂದು ಅಶೋಕ್ ಬಣ್ಣಿಸಿದ್ದಾರೆ.
"ನಂದ ವಂಶದ ಕಥೆಯಂತೆ ಸರ್ಕಾರ ಪತನ"-
ಚಾಣಕ್ಯನ ಶಿಖೆಗೆ ಕೈಹಾಕಿದ ನಂದ ರಾಜವಂಶ ಹೇಗೆ ಪತನವಾಯಿತೋ, ಅದೇ ರೀತಿ ಹಿಂದೂಗಳ ಧಾರ್ಮಿಕ ನಂಬಿಕೆಗಳೊಂದಿಗೆ ಆಟವಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರವೂ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ಆರ್‌ಅಶೋಕ್ ಭವಿಷ್ಯ ನುಡಿದಿದ್ದಾರೆ.
"ಜಾತಿಗಣತಿ ಹೆಸರಿನಲ್ಲಿ ಹಿಂದೂ ಸಮಾಜ ವಿಭಜಿಸುವುದು ಮತ್ತು ಸಂಪ್ರದಾಯಗಳನ್ನು ಅವಹೇಳನ ಮಾಡುವುದಕ್ಕೆ ಸಂಘಟಿತ ಹಿಂದೂ ಸಮಾಜವು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ."
ಆರ್ ಅಶೋಕ್, ವಿರೋಧ ಪಕ್ಷದ ನಾಯಕರು.


