ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಫಿನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಕೆಲವೇ ದಿನಗಳ ಹಿಂದೆ ಬರದ ಛಾಯೆಯಿಂದ ಕಂಗೆಟ್ಟು ಒಣಗುತ್ತಿದ್ದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಈಗ ಮರುಜೀವ ಪಡೆದುಕೊಂಡು ಮೈದುಂಬಿ ಹರಿಯುತ್ತಿವೆ. ವಿಶೇಷವಾಗಿ ಕಳಸ, ಶೃಂಗೇರಿ, ಬಾಳೆಹೊನ್ನೂರು, ಕೊಪ್ಪ ಹಾಗೂ ಮೂಡಿಗೆರೆ ಭಾಗಗಳಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು, ರೈತಾಪಿ ವಲಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ನದಿಗಳು ಫುಲ್; ಗಣನೀಯವಾಗಿ ಹೆಚ್ಚಿದ ಭದ್ರಾ ಜಲಾಶಯದ ಒಳಹರಿವು-
ಕೇವಲ ಎರಡು ವಾರಗಳ ಹಿಂದೆ ಸಂಪೂರ್ಣವಾಗಿ ಬತ್ತಿ ಹೋಗಿ, ಕಲ್ಲು-ಬಂಡೆಗಳ ಪ್ರದರ್ಶನ ಮೈದಾನದಂತಾಗಿದ್ದ ಭದ್ರಾ ನದಿಗೆ ಈಗ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬಾಳೆಹೊನ್ನೂರು ಹಾಗೂ ಕಳಸ ಸಮೀಪ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ ಸಮಾಧಾನಕರವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ನದಿಗಳು ಅಪಾಯದ ಮಟ್ಟ ತಲುಪುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಬಿರುಗಾಳಿ ಹೊಡೆತಕ್ಕೆ ಕತ್ತಲಲ್ಲಿ ಕರಾವಳಿ-ಕಾಡಂಚಿನ ಹಳ್ಳಿಗಳು-
ಮಳೆಯ ಜೊತೆಗೆ ಭಾರಿ ಪ್ರಮಾಣದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಮಲೆನಾಡಿನ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಕಾಡಂಚಿನ ಹಲವಾರು ಗ್ರಾಮಗಳು ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿವೆ. ಸದ್ಯ ಮೆಸ್ಕಾಂ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಪೂರೈಕೆ ಪುನಃ ಸ್ಥಾಪಿಸಲು ಕಸರತ್ತು ನಡೆಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ–169 ರಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್!
ಮಳೆಯ ತೀವ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿದೆ. ರಾಷ್ಟ್ರೀಯ ಹೆದ್ದಾರಿ–169 ರ ತನಿಕೋಡ್‌ನಿಂದ ಎಸ್. ಕೆ. ಬಾರ್ಡರ್‌ವರೆಗಿನ ಮಾರ್ಗದಲ್ಲಿರುವ 4 ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ದು, ಅಪಾಯ ಹೆಚ್ಚಿರುವ ಕಾರಣ ಸೆಪ್ಟಂಬರ್ 30, 2026 ರ ವರೆಗೆ 12 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳ ವಿವರ:
ಟಿಪ್ಪರ್, ಲಾರಿ, ಕಟ್ಟಡ ಸಾಮಗ್ರಿ ವಾಹನಗಳು: ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ ಮಾರ್ಗವನ್ನು ಬಳಸಬೇಕು.
ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು: ಜಯಪುರ–ಬಾಳೆಹೊನ್ನೂರು–ಮಾಗುಂಡಿ–ಕಳಸ–ಕುದುರೆಮುಖ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಕೃಷಿ ಚಟುವಟಿಕೆ ಚುರುಕು: ಗದ್ದೆಗೆ ಇಳಿದ ಅನ್ನದಾತ
ಮಳೆ ವಿಳಂಬವಾದರೂ ಧೃತಿಗೆಡದ ಮಲೆನಾಡಿನ ರೈತರು, ಈಗ ಸಿಕ್ಕ ಅವಕಾಶವನ್ನು ಬಳಸಿಕೊಂಡು ಭತ್ತದ ಕೃಷಿ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಕಳಸ ತಾಲೂಕಿನ ಹುಯಿಗೇರಿ ಸೇರಿದಂತೆ ಹಲವೆಡೆ ರೈತರು ಹೊಲಗಳನ್ನು ಹದಗೊಳಿಸಿ, ಉಳುಮೆ ಹಾಗೂ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಮುಂಗಾರು ಇದೇ ರೀತಿ ಕೈ ಹಿಡಿದರೆ ಈ ಬಾರಿಯ ಕೃಷಿ ಹಂಗಾಮು ಬಂಪರ್ ಆಗಲಿದೆ ಎಂಬ ನಿರೀಕ್ಷೆ ರೈತರದ್ದಾಗಿದೆ.



