ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರವಾಸಕ್ಕಾಗಿ ನಗರಕ್ಕೆ ಆಗಮಿಸಿದ್ದ ರಾಜಸ್ಥಾನ ಮೂಲದ 26 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸಮೀರ್ ಎಂಬಾತನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.
ಅಕ್ಟೋಬರ್ 4ರಂದು ಬೆಂಗಳೂರಿಗೆ ಬಂದಿದ್ದ ಜೈಪುರದ ಯುವತಿ, ಹೊಸೂರು ರಸ್ತೆಯ ಹೋಟೆಲ್ ಹಾಗೂ ಸ್ನೇಹಿತೆಯ ಮನೆಯಲ್ಲಿ ತಂಗಿದ್ದರು. ಕೋರಮಂಗಲದ ಕ್ಲಬ್ ಒಂದರಲ್ಲಿ ಸಿಗರೇಟ್ ಲೈಟರ್ ಕೊಡುವ ನೆಪದಲ್ಲಿ ಪರಿಚಯವಾಗಿದ್ದ ಆರೋಪಿ ಸಮೀರ್, ಯುವತಿಯೊಂದಿಗೆ ಮದ್ಯ ಸೇವಿಸಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದ.
ಅಕ್ಟೋಬರ್ 24ರಂದು ಯುವತಿಯನ್ನು ಪುಸಲಾಯಿಸಿ ಮತ್ತೊಂದು ಹೋಟೆಲ್ಗೆ ಕರೆದೊಯ್ದಿದ್ದ ಆರೋಪಿ, ಆಕೆಗೆ ಮತ್ತಿನ ಔಷಧ ನೀಡಿ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೃತ್ಯ ನಡೆದ 4 ದಿನಗಳ ಬಳಿಕ ಸಂತ್ರಸ್ತೆ ನೀಡಿದ ತಡವಾದ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.




