ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ರಸ್ತೆಗಳಲ್ಲಿ ಪಾದಚಾರಿಗಳ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಇದ್ದ ಅಡ್ಡಿಗಳನ್ನು ನಿವಾರಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಬುಧವಾರ ಬೆಳಗ್ಗೆಯಿಂದಲೇ ಮಹತ್ವದ 'ಸುರಕ್ಷಿತ ಪಾದಚಾರಿ ಮಾರ್ಗ' ಅಭಿಯಾನಕ್ಕೆ ಚಾಲನೆ ನೀಡಿದೆ. ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಸಚಿವರ ಕಟ್ಟುನಿಟ್ಟಿನ ಆದೇಶ
ಜೂನ್ 29 ರಂದು ಸಚಿವ ಕೃಷ್ಣ ಬೈರೇಗೌಡ ಅವರು ಜಿಬಿಎ ವ್ಯಾಪ್ತಿಯ ಐದು ನಗರ ನಿಗಮಗಳಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲು ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಸಚಿವರ ಈ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಬುಧವಾರ ಬೆಳಗ್ಗೆ 9:30 ರಿಂದಲೇ ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ.
ಎಲ್ಲೆಲ್ಲಿ ನಡೆಯುತ್ತಿದೆ ಕಾರ್ಯಾಚರಣೆ?
ನಗರದ ಅತಿ ಹೆಚ್ಚು ಜನದಟ್ಟಣೆ ಇರುವ ಈ ಕೆಳಗಿನ ಪ್ರಮುಖ ರಸ್ತೆಗಳಲ್ಲಿ ಮೊದಲ ಹಂತದ ಒತ್ತುವರಿ ತೆರವು ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಟ್ರಿನಿಟಿ ಜಂಕ್ಷನ್‌ನಿಂದ ಎಂಜಿ ರೋಡ್ ಪಾರ್ಕ್‌ವರೆಗೆ, 100 ಅಡಿ ಇಂದಿರಾನಗರ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್‌ವರೆಗೆ, ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆಯವರೆಗೆ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ (ಜಯನಗರ), ಜಯನಗರದ 8ನೇ ಮತ್ತು 9ನೇ ಮುಖ್ಯರಸ್ತೆ (ಕನಕಪಾಳ್ಯ ರಸ್ತೆಯಿಂದ 15ನೇ ಕ್ರಾಸ್‌ವರೆಗೆ), ಆರ್‌ವಿ ರಸ್ತೆಯ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್‌ವರೆಗೆ ಒತ್ತುವರಿ ತೆರವು ಮಾಡಲಾಗುತ್ತದೆ.
ಇಡೀ ಅಭಿಯಾನವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಹಾಗೂ 'ಬೀದಿ ವ್ಯಾಪಾರಿಗಳ ಕಾಯ್ದೆ'ಯ ನಿಯಮಾವಳಿಗಳಿಗೆ ಅನುಗುಣವಾಗಿಯೇ ಕಾನೂನುಬದ್ಧವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಜಯನಗರದಲ್ಲಿ ಜೆಸಿಬಿ ಸದ್ದು!
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 153 ರ ವ್ಯಾಪ್ತಿಯಲ್ಲಿ ಬರುವ ಜಯನಗರದ ಅಶೋಕ ಪಿಲ್ಲರ್ ಸಮೀಪ ಬುಧವಾರ ಬೆಳಗ್ಗೆಯಿಂದಲೇ ಬಿರುಸಿನ ಕಾರ್ಯಾಚರಣೆ ನಡೆದಿದೆ. ಅಂಗಡಿ ಮುಂಗಟ್ಟುಗಳ ಮಾಲೀಕರು ಫುಟ್‌ಪಾತ್ ಆಕ್ರಮಿಸಿ ಇಟ್ಟಿದ್ದ ಬೋರ್ಡ್‌ಗಳು, ಪ್ರದರ್ಶನ ವಸ್ತುಗಳು ಹಾಗೂ ಕಟ್ಟಡ ಕಾಮಗಾರಿಗಾಗಿ ಹಾಕಿಡಲಾಗಿದ್ದ ಕಲ್ಲು-ಮಣ್ಣುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಜಿಬಿಎ ಮುಂದಿನ ಪ್ಲಾನ್ ಏನು?
ಕೇವಲ ಒತ್ತುವರಿ ತೆರವುಗೊಳಿಸುವುದಷ್ಟೇ ನಮ್ಮ ಗುರಿಯಲ್ಲ ಎನ್ನುತ್ತಾರೆ ಜಿಬಿಎ ಅಧಿಕಾರಿಗಳು. ಒಮ್ಮೆ ತೆರವುಗೊಳಿಸಿದ ಜಾಗವನ್ನು ಭವಿಷ್ಯದಲ್ಲಿ ಸಾರ್ವಜನಿಕರು ಅಥವಾ ವ್ಯಾಪಾರಿಗಳು ಮತ್ತೆ ಅತಿಕ್ರಮಿಸದಂತೆ ನಿರಂತರ ನಿಗಾ ಇಡಲು ಜಿಬಿಎ ಅಧಿಕಾರಿಗಳ ವಿಶೇಷ ತಂಡವನ್ನು ನಿಯೋಜಿಸಲಾಗುತ್ತಿದೆ. ಪಾದಚಾರಿಗಳ ಹಕ್ಕನ್ನು ಅವರಿಗೆ ಮರಳಿ ನೀಡುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.



