Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

'ಬಂಡಾಯ ಸಾಹಿತ್ಯ ಸಂಪುಟ'ಗಳನ್ನು ಪ್ರಕಟಿಸಲಾಗುವುದು ಎಂದು ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ

*ಬಂಡಾಯ ಸಾಹಿತ್ಯ ಸಂಘಟನೆ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನ*

*ಸೃಜನಶೀಲತೆ ಮತ್ತು ಪ್ರಭುತ್ವ’ ಒಂದು ದಿನದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿಕೆ*

ಬಂಡಾಯ ಸಾಹಿತ್ಯದ ವಿವಿಧ ಪ್ರಕಾರಗಳ ಬೃಹತ್ ಸಂಪುಟಗಳ ಪ್ರಕಟಣೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಬಂಡಾಯ ಸಾಹಿತ್ಯ ಚಳವಳಿಯ ಇತಿಹಾಸವನ್ನು ದಾಖಲಿಸುವ ಹಾಗೂ ಹೊಸ ತಲೆಮಾರಿಗೆ ಆಕರ ಗ್ರಂಥವಾಗುವ ನಿಟ್ಟಿನಲ್ಲಿ ಕಥೆ, ಕವಿತೆ, ವಿಮರ್ಶೆ ಹಾಗೂ ವೈಚಾರಿಕ ಬರಹಗಳನ್ನು ಒಳಗೊಂಡ ಪ್ರತ್ಯೇಕ 'ಬಂಡಾಯ ಸಾಹಿತ್ಯ ಸಂಪುಟ'ಗಳನ್ನು ಪ್ರಕಟಿಸಲಾಗುವುದು ಎಂದು ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ  ಅವರು ಮಹತ್ವದ ಘೋಷಣೆ ಮಾಡಿದರು.

ನಗರದ ಪತ್ರಿಕಾ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಅಂಗವಾಗಿ ‘ಸೃಜನಶೀಲತೆ ಮತ್ತು ಪ್ರಭುತ್ವ’ ಕುರಿತ ಒಂದು ದಿನದ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.‌

ಬಂಡಾಯ ಸಾಹಿತ್ಯದ ಚರಿತ್ರೆಯಲ್ಲಿ ವಿವಿಧ ಕಾಲಘಟ್ಟದ ಬರವಣಿಗೆಗಳನ್ನು ಒಂದೇ ಕಡೆ ಡಾಕ್ಯುಮೆಂಟ್ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಥೆಗಳು, ಕವಿತೆಗಳು, ವಿಮರ್ಶೆ ಹಾಗೂ ವೈಚಾರಿಕ ಲೇಖನಗಳನ್ನೊಳಗೊಂಡ ವಿಶಿಷ್ಟ ಸಂಪುಟಗಳನ್ನು ತರುವ ಯೋಜನೆಯ ಬೀಜರೂಪ ಚಿತ್ರದುರ್ಗದಲ್ಲೇ ಮೊಳಕೆಯೊಡೆದಿದೆ. ಈ ಐತಿಹಾಸಿಕ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. 

ಇಂದಿನ ಯುವ ಪೀಳಿಗೆಯಲ್ಲಿ ಹೊಸ ವಿಷಯಗಳನ್ನು ತಿಳಿಯುವ, ಸಾಹಿತ್ಯವನ್ನು ಗ್ರಹಿಸುವ ಹಸಿವಿದೆ. ಆದರೆ ಹೊಸ ತಲೆಮಾರಿಗೆ ನಾವು ನೀಡಬೇಕಾದ್ದನ್ನು ಸರಿಯಾಗಿ ನೀಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನವನ್ನು ಹಿರಿಯರು ಮಾಡಿಕೊಳ್ಳಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳಲ್ಲಿ ಹಿರಿಯರು ಮಾರ್ಗದರ್ಶಕರಾಗಿ ಇರಬೇಕೇ ಹೊರತು, ವಿಷಯ ಮಂಡನೆ ಮತ್ತು ವೇದಿಕೆಯ ಮುಂಚೂಣಿಯಲ್ಲಿ ಹೊಸ ತಲೆಮಾರಿನವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ನಿರ್ಣಾಯಕ ತೀರ್ಮಾನವನ್ನು ನಾವು ಬೆಂಗಳೂರಿನ ಸಭೆಯಲ್ಲಿ ತೆಗೆದುಕೊಂಡಿದ್ದೆವು. ಅದರಂತೆ ಈ ಯುವಕರಲ್ಲಿ ಬರೆಯುವ ಉತ್ಸಾಹ ಮೂಡಿಸಬೇಕಿದೆ. ಚೀನಾದಲ್ಲಿ ಮಾವೋತ್ಸೆ ತುಂಗ್ ಅವರ ಚಳವಳಿ ಹುಟ್ಟಿದ್ದು ಕೇವಲ ನಾಲ್ಕು ಜನ ಲೈಬ್ರರಿಯಲ್ಲಿ ಕುಳಿತು ಮಾತನಾಡಿದ್ದರಿಂದಲೇ ಎಂಬುದನ್ನು ನೆನಪಿಟ್ಟುಕೊಂಡು ನಾವು ನಿರಾಶಾವಾದಿಗಳಾಗದೆ ಕೆಲಸ ಮಾಡಬೇಕು‌ ಎಂದರು.

ಕೆಲ ದಿನಗಳ ಹಿಂದೆ ಬೆಂಗಳೂರಿನ ಕವನ ಸಂಕಲನ ಬಿಡುಗಡೆ ಸಮಾರಂಭವೊಂದರಲ್ಲಿ ಕೇಳಿಬಂದ ಟೀಕೆಯೊಂದನ್ನು ಪ್ರಸ್ತಾಪಿಸಿದ ಬರಗೂರು, "ಕಳೆದ 25 ವರ್ಷಗಳಲ್ಲಿ ಕನ್ನಡದಲ್ಲಿ ಹತ್ತೇ ಹತ್ತು ಉತ್ತಮ ಕವಿತೆಗಳು ಬಂದಿಲ್ಲ, ಹೊಸ ತಲೆಮಾರಿನವರು ಏನನ್ನೂ ಬರೆಯುತ್ತಿಲ್ಲ ಎಂದು ಹಿರಿಯರೊಬ್ಬರು ಅಲ್ಲಿ ಹೇಳಿದ್ದರು. ಇದು ಇಡೀ ಹೊಸ ತಲೆಮಾರಿಗೆ ಮಾಡಿದ ಅವಮಾನ. ಅರುಣ್ ಅವರ ‘ಅವ್ವನ ಅಂಗನವಾಡಿ’ ಕವನ ಸಂಕಲನದಂತಹ ಅತ್ಯುತ್ತಮ ಕೃತಿಗಳು ಇವತ್ತಿಗೂ ಯುವ ಜನತೆಯಿಂದ ಮೂಡಿಬರುತ್ತಿವೆ. ಯುವಕರ ಬರವಣಿಗೆಯನ್ನು ಗೌರವಿಸುವುದು ನಮ್ಮ ಕರ್ತವ್ಯ‌ಎಂದು ಪ್ರತಿಪಾದಿಸಿದರು.

"ಬಂಡಾಯ ಸಾಹಿತ್ಯ ಸಂಘಟನೆಯು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ರಾಜ್ಯದ ಪ್ರಮುಖ ಜನಚಳವಳಿಗಳಾದ ರೈತ ಚಳವಳಿ, ದಲಿತ ಚಳವಳಿ, ಕಾರ್ಮಿಕ ಮತ್ತು ಮಹಿಳಾ ಚಳವಳಿಗಳ ಜೊತೆ ಸಹಯಾತ್ರಿಯಾಗಿ ಕೆಲಸ ಮಾಡಿದೆ. ಈ ಚಳವಳಿಗಳೇ ನಮ್ಮ ಮನಸ್ಸನ್ನು ಹಸನುಗೊಳಿಸಿ ಬೆಳೆಸಿದ್ದು. ಸಾಹಿತ್ಯ ಕ್ಷೇತ್ರದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ವಿಸ್ತರಿಸುವ ಆಶಯದೊಂದಿಗೆ 1979ರಲ್ಲಿ ಜನ್ಮತಾಳಿದ ಈ ಸಂಘಟನೆ, ಇವತ್ತಿನವರೆಗೆ ಅಂದರೆ ಕಳೆದ 47 ವರ್ಷಗಳಿಂದ ಒಡೆಯದೇ, ಎಲ್ಲರನ್ನೂ ಒಳಗೊಳ್ಳುತ್ತಾ ಜೀವಂತವಾಗಿ ಮುನ್ನಡೆದಿರುವುದು ಹೆಮ್ಮೆಯ ವಿಷಯ‌ ಎಂದರು.

ಬಂಡಾಯ ಸಾಹಿತ್ಯ ಸಂಘಟನೆಯ ಹಲವು ಐತಿಹಾಸಿಕ ನಿರ್ಧಾರಗಳು ಮತ್ತು ಮೊದಲ ಹೆಜ್ಜೆಗಳಿಗೆ ಚಿತ್ರದುರ್ಗ ಸಾಕ್ಷಿಯಾಗಿದೆ. ಇಲ್ಲಿ ಹಿಂದೆ ನಡೆದ ಜನಸಂಸ್ಕೃತಿ ಸಮಾವೇಶ, 'ಭಾರತೀಯ ಸಾಹಿತ್ಯದಲ್ಲಿ ಬಂಡಾಯ ಪ್ರಜ್ಞೆ'ಯಂತಹ ರಾಷ್ಟ್ರೀಯ ವಿಚಾರ ಸಂಕಿರಣಗಳು ನಮ್ಮ ಸಂಘಟನೆಯ ಇತಿಹಾಸದಲ್ಲಿ ಮೈಲಿಗಲ್ಲುಗಳಾಗಿವೆ. ಇಂದು ನಡೆಯುತ್ತಿರುವ ಸೃಜನಶೀಲತೆ ಮತ್ತು ಪ್ರಭುತ್ವದ ನಡುವಿನ ಸಂಬಂಧದ ಚರ್ಚೆಯೂ ಸಮಕಾಲೀನ ಸವಾಲುಗಳನ್ನು ಎದುರಿಸಲು ನಮಗೆ ದಾರಿದೀಪವಾಗಲಿದೆ‌ ಎಂದು ಆಶಿಸಿದರು.

*ಬರವಣಿಗೆಯೇ ಬಂಡಾಯ; ಭಾವ ಭಾರತ ಸ್ವಚ್ಛವಾಗಬೇಕಿದೆ:*  ದೇಶದ ತಳಸಮುದಾಯಗಳು ಮತ್ತು ಮಹಿಳೆಯರು ಬರೆಯಲು ಆರಂಭಿಸಿದ್ದೇ ಅತ್ಯಂತ ದೊಡ್ಡ ಬಂಡಾಯವಾಗಿದೆ. ಅಕ್ಷರ ಮತ್ತು ಬರವಣಿಗೆ ಎನ್ನುವುದು ಕೇವಲ ಶಿಷ್ಟ ವರ್ಗದ ಸೊತ್ತಲ್ಲ, ನಮ್ಮ ಜನಪದರೂ ಮೌಖಿಕ ಅಕ್ಷರಸ್ಥರಾಗಿದ್ದರು. ಇಂದು ಸಮಾಜದಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸುವ ‘ಸ್ವಚ್ಛ ಭಾರತ’ಕ್ಕಿಂತಲೂ ಮನಸ್ಸುಗಳನ್ನು ಶುದ್ಧೀಕರಿಸುವ ‘ಭಾವ ಭಾರತ’ ಸ್ವಚ್ಛವಾಗಬೇಕಾದ ಅಗತ್ಯತೆ ಹೆಚ್ಚಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯದ ಮೂಲ ಆಶಯ ವಿವರಿಸಿದ ಬರಗೂರು ಅವರು, ಯಾರಿಗೆ ಅಕ್ಷರಗಳು ನಿರಾಕರಿಸಲ್ಪಟ್ಟಿದ್ದವೋ, ಅಂತಹ ತಳಸಮುದಾಯದ ಜನ ಮತ್ತು ಮಹಿಳೆಯರು ಇಂದು ತಮ್ಮ ನೋವು,  ನಲಿವು ಹಾಗೂ ಆಕ್ರೋಶಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಪಡಿಸುತ್ತಿದ್ದಾರೆ. ಈ ಅಭಿವ್ಯಕ್ತಿ ಕ್ರಮವನ್ನು ಕೀಳಾಗಿ ಕಾಣುವುದು ಪ್ರಭುತ್ವದ ಮತ್ತು ಶೋಷಕ ಮನಸ್ಥಿತಿಯ ಲಕ್ಷಣವಾಗಿದೆ. ಹೊಸ ತಲೆಮಾರಿನ ಲೇಖಕರು ಅತ್ಯಂತ ಸೊಗಸಾಗಿ ಬರೆಯುತ್ತಿದ್ದಾರೆ. ಪ್ರತಿ ಕಾಲಘಟ್ಟದಲ್ಲೂ ಸಾಹಿತ್ಯದಲ್ಲಿ ಜೊಳ್ಳು ಮತ್ತು ಗಟ್ಟಿ ಇದ್ದೇ ಇರುತ್ತದೆ. ಆದರೆ, ಹೊಸ ತಲೆಮಾರಿಗೆ ಒಂದು ಸ್ಪಷ್ಟವಾದ ಸೈದ್ಧಾಂತಿಕ ಹಾಗೂ ಸಾಮಾಜಿಕ ಪ್ರಜ್ಞೆಯ ದಿಕ್ಸೂಚಿ ಬೇಕಾಗಿದೆ ಎಂದರು.

ಇಂದಿನ ದಿನಗಳಲ್ಲಿ ಸೃಜನಶೀಲತೆಗೆ ಅಡ್ಡಿಯಾಗುತ್ತಿರುವ ಪ್ರಮುಖ ಪಿಡುಗುಗಳಾದ ಸಿನಿಕತನ ಮತ್ತು ಸಮೂಹ ಸನ್ನಿಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಸಿನಿಕತನ ಎನ್ನುವುದು ಕೇವಲ ಅಹಂಕಾರ ಮತ್ತು ಆತ್ಮರತಿಯಲ್ಲ, ಅದೊಂದು ಅರೋಚಕತನವೂ ಹೌದು. ಸಿನಿಕತನ ಹೆಚ್ಚಾದಾಗ ನಮಗೆ ಸೃಜನಶೀಲವಾಗಿ ಯಾವುದೂ ಇಷ್ಟವಾಗುವುದಿಲ್ಲ. ನಮ್ಮ ಟೀಕೆಗಳು ವೈಚಾರಿಕ ಮತ್ತು ಪ್ರಬುದ್ಧ ಸಂವಾದದ ರೂಪದಲ್ಲಿರಬೇಕೇ ಹೊರತು ಉಡಾಫೆಯ ಧೋರಣೆಯಾಗಬಾರದು ಎಂದು ಎಚ್ಚರಿಸಿದರು. ಇದೇ ವೇಳೆ, ಇವತ್ತು ಜಾತಿ, ಧರ್ಮದ್ವೇಷ ಮತ್ತು ತಾರತಮ್ಯಗಳ ಹೆಸರಿನಲ್ಲಿ ದೇಶದಲ್ಲಿ ಸೃಷ್ಟಿಸಲಾಗುತ್ತಿರುವ ಸಮೂಹ ಸನ್ನಿ ಅತ್ಯಂತ ಅಪಾಯಕಾರಿಯಾಗಿದ್ದು, ಯುವಜನರು ಅತ್ಯಂತ ಸುಲಭವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ನಮ್ಮ ಸೌಹಾರ್ದತೆಯ ಪರಂಪರೆಯನ್ನು ಉಳಿಸಿಕೊಳ್ಳಲು ಈ ಸಮೂಹ ಸನ್ನಿಯ ವಿರುದ್ಧ ಪ್ರಬಲ ಸಾಂಸ್ಕೃತಿಕ ಪ್ರತಿರೋಧ ಕಟ್ಟಬೇಕಿದೆ ಎಂದು ನೀಡಿದರು.

ಪ್ರಭುತ್ವ ಮತ್ತು ಸಮೂಹ ಸನ್ನಿಗಳು ಇಂದು ಮನುಷ್ಯನ ಪಂಚೇಂದ್ರಿಯಗಳನ್ನು ಮಲಿನಗೊಳಿಸುತ್ತಿವೆ ಎಂದು ವಿಷಾದಿಸಿದ ಅವರು, ಇಂದ್ರಿಯಗಳ ಪ್ರಜಾಪ್ರಭುತ್ವೀಕರಣದ ಹೊಸದೊಂದು ತಾತ್ವಿಕ ಚಿಂತನೆಯನ್ನು ಮಂಡಿಸಿದರು. ಕಿವಿ ಕೇವಲ ಕೇಳಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ಕೇಳಿಸಿಕೊಂಡದ್ದನ್ನು ವಿವೇಚನೆಗೆ ಒಳಪಡಿಸಬೇಕು. ಕಣ್ಣು ಇತರರ ಕಷ್ಟ, ಸಂಕಟಗಳನ್ನು ಕರುಣೆಯಿಂದ ನೋಡುವ ದೃಷ್ಟಿಯಾಗಬೇಕು. ನಾಲಿಗೆಯು ಕಣ್ಣು ಕಂಡದ್ದಕ್ಕೆ ಮತ್ತು ಕಿವಿ ಕೇಳಿದ್ದಕ್ಕೆ ಪ್ರಾಮಾಣಿಕ ಧ್ವನಿಯಾಗಬೇಕು. ಯಾವುದೇ ತಾರತಮ್ಯವಿಲ್ಲದ ಸ್ಪರ್ಶವೇ ಚರ್ಮದ ನಿಜವಾದ ಧರ್ಮವಾಗಿದ್ದು, ನಾವು ಸ್ಪರ್ಶೇಂದ್ರಿಯವನ್ನು ಪ್ರಜಾಸತ್ತಾತ್ಮಕಗೊಳಿಸಿದರೆ ಅಲ್ಲಿ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮ ಧರ್ಮಕ್ಕೆ ಜಾಗವಿರುವುದಿಲ್ಲ. ಇಂದು ನಮ್ಮಲ್ಲಿ ಕಣ್ಣು, ಕಿವಿಗಳು ಮಲಿನಗೊಂಡು, ನಾಲಿಗೆಗಳು ಮಾತ್ರ ಉದ್ದವಾಗಿವೆ. ಈ 'ನಾಗರ ನಾಲಿಗೆಗಳ' ಮತ್ಸರದ ಸಂಸ್ಕೃತಿಯಿಂದ ನಾವೆಲ್ಲರೂ ಹೊರಬರಬೇಕಾಗಿದೆ ಎಂದು ಪ್ರತಿಪಾದಿಸಿದರು.

*ಪ್ರಭುತ್ವಕ್ಕೆ ಸೃಜನಶೀಲತೆ ಅಡಿಯಾಳಾಗಬಾರದು* ಸೃಜನಶೀಲತೆ ಎಂಬುದು ಎಂದಿಗೂ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭುತ್ವಗಳ ಅಡಿಯಾಳಾಗಬಾರದು. ಬದಲಿಗೆ ಪ್ರಭುತ್ವಕ್ಕೆ ಕನ್ನಡಿ ಹಿಡಿಯುವ ಹಾಗೂ ಅದಕ್ಕೆ ಪ್ರತಿಭಟನೆಯ ಸವಾಲು ಒಡ್ಡುವ ಶಕ್ತಿಯಾಗಿ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ವಿಮರ್ಶೆಗೆ ಒಂದಿಷ್ಟು ಕೃತಕ ವ್ಯಾಕರಣವನ್ನು ಸೃಷ್ಟಿಸಿಕೊಂಡು, ಅದರ ಮೂಲಕ ಇದು ಶ್ರೇಷ್ಠ, ಇದು ಕನಿಷ್ಠ ಎಂದು ತೀರ್ಪು ನೀಡುವ ಪರಿಪಾಠ ಬೆಳೆದಿದೆ. ಈ ವಿಮರ್ಶೆಯ ವ್ಯಾಕರಣವು ಹೊಸ ತಲೆಮಾರಿನ ಬರಹಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ವಿಶ್ಲೇಷಿಸಲು ಅಡ್ಡಿಯಾಗುತ್ತಿದೆ. ವಿಮರ್ಶೆಗೆ ಬೇಕಾಗಿರುವುದು ಕೃತಕ ವ್ಯಾಕರಣವಲ್ಲ, ಬದಲಿಗೆ ಕೃತಿಯ ಒಳಗಿರುವ ಜೀವನದ ತಾತ್ವಿಕತೆ‌ ಎಂದು ಬರಗೂರು ವಿಷಾದಿಸಿದರು.

ವಯಸ್ಸಿನಲ್ಲಿ ಯುವಕರಾಗಿರುವವರೆಲ್ಲರೂ ಆಲೋಚನೆಗಳಲ್ಲಿ ಹೊಸ ತಲೆಮಾರಿನವರಾಗಿರಬೇಕೆಂದೇನೂ ಇಲ್ಲ. 25 ವರ್ಷದ ಯುವಕನಿಗೆ 75 ವರ್ಷದ ಮುಪ್ಪಿನ ಆಲೋಚನೆಗಳಿರಬಹುದು; ಹಾಗೆಯೇ 75 ವರ್ಷದ ಹಿರಿಯನಿಗೆ 25 ರ ಯುವ ಆಲೋಚನೆಗಳು ಇರಬಹುದು. ನಮಗೆ ಬೇಕಾಗಿರುವುದು ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ಯುವ ಆಲೋಚನೆಯನ್ನು ಕಾಯ್ದುಕೊಳ್ಳುವ ಹೊಸ ತಲೆಮಾರು ಎಂದು ಅವರು ವ್ಯಾಖ್ಯಾನಿಸಿದರು.

ಸೃಜನಶೀಲತೆಯು ಪ್ರಭುತ್ವಕ್ಕೆ ಕೆಲವು ಆದೇಶ ಹಾಗೂ ಸೂಚನೆಗಳನ್ನು ನೀಡುತ್ತಾ ಹೋಗುತ್ತದೆ. ಪಂಪ ಮಹಾಕವಿ ರಾಜನ ಆಸ್ಥಾನದಲ್ಲಿದ್ದರೂ ತನ್ನ ಸೃಜನಶೀಲತೆಯನ್ನು ಪ್ರಭುತ್ವಕ್ಕೆ ಅಡಿಯಾಳಾಗಗೊಡಲಿಲ್ಲ. ಮಹಾಭಾರತದ ಕಥೆಯನ್ನು ಬರೆಯುವಾಗ ಅರ್ಜುನನನ್ನು ನಾಯಕನನ್ನಾಗಿ ಮಾಡಿ 'ವಿಕ್ರಮಾರ್ಜುನ ವಿಜಯ' ಎಂದು ಕರೆದರೂ, ಕೃತಿಯ ಒಳಗಡೆ 'ಕರ್ಣರಸಾಯನವಲ್ತೆ ಭಾರತಂ' ಎನ್ನುವ ಮೂಲಕ ಶೂದ್ರ/ಸೂತ ಪುತ್ರ ಕರ್ಣನನ್ನು ಭಾರತದ ಕಥೆಯ ನಾಯಕನೆಂದು ಬಿಂಬಿಸಿದ. ಇದು ಪ್ರಭುತ್ವದ ಒಳಗಿದ್ದುಕೊಂಡೇ ಪಂಪ ತೋರಿದ ಪ್ರತಿನಾಯಕತ್ವ ಅಥವಾ ಪ್ರತಿಭಟನೆ‌ ಎಂದರು.

ಅದೇ ರೀತಿ, ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರೂ ರಾಜನ ಆಡಳಿತದ ಒಳಗಿದ್ದುಕೊಂಡೇ ದೊಡ್ಡ ವೈಚಾರಿಕ ಚಳವಳಿಯನ್ನು ಕಟ್ಟಿದರು. ಪ್ರಭುತ್ವದ ಜೊತೆಗಿದ್ದೂ ಪ್ರಭುತ್ವವನ್ನು ಮೀರಿ ಬೆಳೆಯುವುದು ಹೇಗೆ ಎಂಬುದನ್ನು ಬಸವಣ್ಣ ಮತ್ತು ಕೃತಿಯ ಮೂಲಕ ಸೃಜನಶೀಲತೆಯ ಶಕ್ತಿ ತೋರಿದ ಪಂಪ ನಮಗೆ ಮಾದರಿಯಾಗಿದ್ದಾರೆ ಎಂದರು. 

ದೇಶದಲ್ಲಿ ಜಾರಿಯಾದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವವು ಸೃಜನಶೀಲ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿತು. 'ಕಿಸಾ ಕುರ್ಸಿ ಕಾ' ಹಿಂದಿ ಚಿತ್ರದ ಬಿಡುಗಡೆಗೆ ಅವಕಾಶ ನೀಡಲಿಲ್ಲ. ತೆಲುಗಿನ 'ಎರ್ರ ಮಂದಾರಂ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿತು. ಇಂತಹ ಕಠಿಣ ಕಾಲದಲ್ಲೂ ಸಾಹಿತ್ಯವು ಸುಮ್ಮನೆ ಕೂರಲಿಲ್ಲ. ಜಿ.ಎಸ್. ಸದಾಶಿವ ಅವರಂತಹ ಕಥೆಗಾರರು 'ಮೀಸೆಯವರು' ಎಂಬ ಕತೆಯ ಮೂಲಕ ಪ್ರಭುತ್ವದ ದಬ್ಬಾಳಿಕೆಯನ್ನು ಅನ್ಯೋಕ್ತಿ ವಿಧಾನದಲ್ಲಿ ಲೇವಡಿ ಮಾಡಿದರು. ಅನ್ಯೋಕ್ತಿ ವಿಧಾನದ ಮೂಲಕ ಪ್ರಭುತ್ವವನ್ನು ಎದುರಿಸುವ ಕ್ರಮವನ್ನು ನಮಗೆ ನಮ್ಮ ಹಳೆಯ ಪಂಚತಂತ್ರ ಕತೆಗಳೇ ಕಲಿಸಿಕೊಟ್ಟಿವೆ ಎಂದು ನೆನಪಿಸಿಕೊಂಡರು.

ಸೃಜನಶೀಲತೆ ಎಂಬುದು ದುಷ್ಟ ಸರ್ಕಾರಗಳಿದ್ದಾಗ ಮೌನವಾಗಿರದೆ, ಸಮೀಪ ಮತ್ತು ದೂರದ ಸಂಬಂಧಗಳನ್ನು ಏಕಕಾಲಕ್ಕೆ ಕಾಯ್ದುಕೊಳ್ಳುತ್ತಾ ಪ್ರಭುತ್ವದ ಮಿತಿಗಳನ್ನು ಬೆತ್ತಲೆ ಮಾಡಬೇಕು. ಇತಿಹಾಸದುದ್ದಕ್ಕೂ ಕನ್ನಡ ಸಾಹಿತ್ಯ ಈ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ ಎಂದರು.

ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಇಂದಿನ ಸಂಕೀರ್ಣ ಹಾಗೂ ದುರಿತ ಕಾಲಘಟ್ಟದಲ್ಲಿ ಕಳೆದುಹೋಗುತ್ತಿರುವ ಮನುಷ್ಯ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಮರಳಿ ಹುಡುಕಿ, ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಲು ಬಂಡಾಯ ಸಾಹಿತ್ಯದ ಸೈದ್ಧಾಂತಿಕ ಬದ್ಧತೆ ಅತ್ಯಂತ ಅಗತ್ಯವಾಗಿದೆ ಎಂದು  ಆಶಯ ವ್ಯಕ್ತಪಡಿಸಿದರು.

ತಮ್ಮ ಇಪ್ಪತ್ತು ವರ್ಷಗಳ ಸಂಘಟನಾತ್ಮಕ ಪಯಣ ಸ್ಮರಿಸಿದ ಅವರು, "ನಾನು ಚಿತ್ರದುರ್ಗಕ್ಕೆ ವರ್ಗಾವಣೆಯಾಗಿ ಬಂದ 2006ರಲ್ಲಿ ಜಿ. ರಾಮಕೃಷ್ಣ ಅವರ ‘ಮುನ್ನೋಟ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮೂಲಕ ಈ ಸಂಘಟನೆಯೊಂದಿಗೆ ಸಕ್ರಿಯ ಒಡನಾಟ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಬಂಡಾಯ ಸಾಹಿತ್ಯ ಸಂಘಟನೆಯು ನನಗೆ ಹೇಗೆ ಮಾತನಾಡಬೇಕು, ಹೇಗೆ ಬರೆಯಬೇಕು ಮತ್ತು ಹೇಗೆ ಸಂಘಟಿಸಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಡೀ ಜಗತ್ತನ್ನು ಪ್ರೀತಿಸುವ ‘ಮನುಷ್ಯ ಪ್ರೀತಿ’ಯನ್ನು ದಾರೆ ಎರೆದಿದೆ. ಬದುಕಿನ ಈ ಬದ್ಧತೆಯೇ ನಮ್ಮನ್ನು ಜೀವಂತವಾಗಿರಿಸುತ್ತದೆ ಮತ್ತು ಬೆಳೆಸುತ್ತದೆ‌ಎಂದರು.

ಇಂದಿನ ಯುವಶಕ್ತಿಯ ಹಾದಿ ತಪ್ಪುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಕರಿಯಪ್ಪ ಮಾಳಿಗೆ ಅವರು, ಇಂದಿನ ಯುವಜನತೆ ಓದುತ್ತಿದ್ದಾರೆ, ಆದರೆ ಯಾಕೆ ಓದುತ್ತಿದ್ದಾರೆ ಎಂಬ ಸ್ಪಷ್ಟತೆ ಅವರಿಗಿಲ್ಲ. ರಾಜಕೀಯ ಪಕ್ಷಗಳ ಮೆರವಣಿಗೆಗಳಲ್ಲಿ, ವಿವಿಧ ಸಂಘಟನೆಗಳಲ್ಲಿ ಕಾಣಿಸಿಕೊಳ್ಳುವ ಅವರು ತಾವೇಕೆ ಅಲ್ಲಿ ಭಾಗವಹಿಸುತ್ತಿದ್ದೇವೆ ಎಂಬ ಅರಿವಿಲ್ಲದೆ ಅಸ್ಪಷ್ಟತೆಯ ಸುಳಿಯಲ್ಲಿ ಸಿಲುಕಿದ್ದಾರೆ. ಸೈದ್ಧಾಂತಿಕ ಪ್ರಜ್ಞೆ ಮತ್ತು ಬದ್ಧತೆ ಇಲ್ಲದಿದ್ದಾಗ ಯುವಶಕ್ತಿ ಹಾದಿ ತಪ್ಪುತ್ತದೆ. ಯುವಮನಸ್ಸುಗಳಿಗೆ ಬದುಕಿನ ದೃಷ್ಟಿಕೋನವನ್ನು ಬದಲಿಸುವ ಓದು ಮತ್ತು ಸಂವಾದಗಳು ಇಂದಿನ ತುರ್ತು ಅಗತ್ಯಗಳಾಗಿವೆ ಎಂದು ಕಿವಿಮಾತು ಹೇಳಿದರು.

ಚಿತ್ರದುರ್ಗ ಜಿಲ್ಲೆಯು ಕೇವಲ ಬಡತನ, ಹಸಿವಿನ ನೆಲವಲ್ಲ; ಇದು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಚಳವಳಿಗಳ ತವರೂರಾಗಿದೆ. ಕಳೆದ ಐದಾರು ದಶಕಗಳಿಂದ ಇಲ್ಲಿ ನಿರಂತರವಾಗಿ ಜನಪರ ಚಳವಳಿಗಳು ನಡೆದುಕೊಂಡು ಬಂದಿವೆ. ಬಂಡಾಯ ಸಾಹಿತ್ಯ ಸಂಘಟನೆಯು ಯಾವುದೇ ಬಣಗಳಿಲ್ಲದೆ ಅತ್ಯಂತ ಆರೋಗ್ಯವಂತವಾಗಿ ಬೆಳೆದುಬಂದಿದೆ. 

ಕಾರ್ಯಕ್ರಮದಲ್ಲಿ ಚಿಂತಕ ಯಾದವರೆಡ್ಡಿ, ಪ್ರಾಧ್ಯಾಪಕರಾದ ಅರುಣ್ ಜೋಳದ ಕೂಡ್ಲಿಗಿ, ನವೀನ್ ಮಂಡಗದ್ದೆ ಸೇರಿದಂತೆ  ಮತ್ತಿರರು ಇದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!