ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮದ್ಯಪಾನ ಮಾಡಲು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗನೋರ್ವ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹರಪನಹಳ್ಳಿ ಮೂಲದ ಬುಳ್ಳಮ್ಮ (70) ಮೃತ ದುರ್ದೈವಿ. ಹನುಮಂತಪ್ಪ (35) ಕೊಲೆ ಮಾಡಿದ ಆರೋಪಿ.
ಘಟನೆಯ ವಿವರ: ಮಗ ಹನುಮಂತಪ್ಪನ ನಿರಂತರ ಕಿರುಕುಳ ತಾಳಲಾರದೆ ಬುಳ್ಳಮ್ಮ ಅವರು ದೊಡ್ಡಘಟ್ಟ ಗ್ರಾಮದಲ್ಲಿದ್ದ ತಮ್ಮ ಮಗಳ ಮನೆಗೆ ಬಂದು ಆಶ್ರಯ ಪಡೆದಿದ್ದರು. ತಾಯಿಯನ್ನು ಹುಡುಕಿಕೊಂಡು ಅಲ್ಲಿಗೂ ಬಂದ ಆರೋಪಿ, ಕುಡಿಯಲು ಹಣ ನೀಡುವಂತೆ ಪೀಡಿಸಿದ್ದಾನೆ. ತಾಯಿ ಹಣ ಕೊಡಲು ಒಪ್ಪದಿದ್ದಾಗ ಕೋಪಗೊಂಡು ದೊಣ್ಣೆಯಿಂದ ಬಲವಾಗಿ ಹಲ್ಲೆ ನಡೆಸಿದ್ದು, ತೀವ್ರ ಪೆಟ್ಟು ಬಿದ್ದ ಪರಿಣಾಮ ಬುಳ್ಳಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಳೆಯ ಅಪರಾಧದ ಹಿನ್ನೆಲೆ: ಆರೋಪಿ ಹನುಮಂತಪ್ಪ ಈ ಹಿಂದೆಯೂ ಹಣದ ವಿಚಾರಕ್ಕೆ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ 7 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಕೇವಲ ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.




