ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೀಪಾವಳಿ ಆಚರಣೆ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ವರ್ಷದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ದೆಹಲಿಯ ನರೆಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತ ಬಾಲಕನನ್ನು ರಿಷಿ ಎಂದು ಗುರುತಿಸಲಾಗಿದೆ. ಕುಟುಂಬದವರೊಂದಿಗೆ ಪಟಾಕಿ ಸಿಡಿಸುತ್ತಿದ್ದಾಗ, ಮೇಲಕ್ಕೆ ಹಾರಬೇಕಿದ್ದ ರಾಕೆಟ್ ಪಟಾಕಿ ನೇರವಾಗಿ ಬಾಲಕನ ಎದೆಗೆ ಬಡಿದು ಸ್ಫೋಟಗೊಂಡಿದೆ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಸತ್ಯವಾಡಿ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ.
ವೈದ್ಯರ ಸಮಯೋಚಿತ ಚಿಕಿತ್ಸೆಯ ಅಭಾವವೇ ಮಗನ ಸಾವಿಗೆ ಕಾರಣ ಎಂದು ಬಾಲಕನ ಪೋಷಕರು ಮತ್ತು ಸಹೋದರ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.
ಇನ್ನೊಂದೆಡೆ, ದೀಪಾವಳಿ ರಾತ್ರಿ ದೆಹಲಿ ಅಗ್ನಿಶಾಮಕ ದಳಕ್ಕೆ ಬೆಂಕಿ ಅವಘಡಗಳಿಗೆ ಸಂಬಂಧಿಸಿದಂತೆ ಒಟ್ಟು 257 ಕರೆಗಳು ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಐವರು ಅಗ್ನಿಶಾಮಕ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.




