ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ನಾನು ರಾಜ್ಯ ಸಚಿವ ಸಂಪುಟದಲ್ಲಿ ಸಚಿವನಾಗಿರುವುದನ್ನು ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನನ್ನ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಆರೋಪಿಸಿದ್ದಾರೆ.
ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪ, ದಲಿತ ರಾಜಕಾರಣ ಹಾಗೂ ಬಳ್ಳಾರಿಯ ಮೂಲಸೌಕರ್ಯ ಅಭಿವೃದ್ಧಿ ಕುರಿತು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.
ನ್ಯಾಯಾಲಯದಲ್ಲಿರುವ ಪ್ರಕರಣ: "ನನ್ನ ಮೇಲಿರುವುದು ಬರಿ ಆರೋಪ ಅಷ್ಟೇ, ನಾನು ಅಪರಾಧಿಯಲ್ಲ. ಈ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದ್ದು, ಕಾನೂನಾತ್ಮಕವಾಗಿ ನಮ್ಮ ವಾದ ಮಂಡಿಸಲಿದ್ದೇವೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರದಲ್ಲಿಯೂ ಹಲವು ನಾಯಕರ ವಿರುದ್ಧ ಪ್ರಕರಣಗಳಿವೆ, ಹಾಗೆಂದು ಎಲ್ಲರೂ ರಾಜೀನಾಮೆ ನೀಡುವುದಿಲ್ಲ. ಪ್ರತಿಪಕ್ಷಗಳ ಆರೋಪಕ್ಕೆ ಸದನದಲ್ಲೇ ಸೂಕ್ತ ಉತ್ತರ ನೀಡಲಾಗುವುದು," ಎಂದರು.
ದಲಿತ ಸಚಿವನೆಂದು ತುಳಿಯುವ ಯತ್ನ: ತಾವು ದಲಿತ ಕುಟುಂಬದಿಂದ ಬಂದಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದ ಸಚಿವರು, ಇದನ್ನು ಮುಂದಿಟ್ಟುಕೊಂಡು ತಮ್ಮನ್ನು ರಾಜಕೀಯವಾಗಿ ತುಳಿಯುವ ಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖರ್ಗೆ ಭಾಷಣದ ಸ್ಥಳ ಶುದ್ಧೀಕರಣಕ್ಕೆ ಖಂಡನೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆ ಸಂವಿಧಾನಕ್ಕೆ ಮಾಡಿದ ಅಪಮಾನ ಹಾಗೂ ನಾಚಿಕೆಗೇಡಿನ ಕೃತ್ಯ ಎಂದ ಸಚಿವರು, ಕೇಂದ್ರ ಸರ್ಕಾರ ಜಾತಿ ತಾರತಮ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಬಳ್ಳಾರಿ ಜೀನ್ಸ್ ಪಾರ್ಕ್‌ಗೆ 1,000 ಎಕರೆ ಭೂಮಿ ಅಗತ್ಯ:
ಬಳ್ಳಾರಿಯಲ್ಲಿ ಬೃಹತ್ ‘ಜೀನ್ಸ್ ಪಾರ್ಕ್’ ಸ್ಥಾಪನೆಯ ಕುರಿತು ಮಾಹಿತಿ ನೀಡಿದ ಸಚಿವರು, ಈ ಯೋಜನೆಗೆ ಸುಮಾರು 1,000 ಎಕರೆ ಭೂಮಿಯ ಅಗತ್ಯವಿದೆ. ಪ್ರಸ್ತುತ ಮೆಂಚೇರಿ ಭಾಗದಲ್ಲಿ 666 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಜೀನ್ಸ್ ಉದ್ಯಮಕ್ಕೆ ಹೆಚ್ಚಿನ ನೀರು ಬೇಕಾಗುವುದರಿಂದ ಹಾಗೂ ಸ್ಥಳೀಯರಿಗೆ ಗರಿಷ್ಠ ಅನುಕೂಲ ಕಲ್ಪಿಸುವ ಉದ್ದೇಶದಿಂದ ಯೋಜನೆ ಕೊಂಚ ವಿಳಂಬವಾಗುತ್ತಿದೆ ಎಂದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪರಿಕಲ್ಪನೆಯ ಈ ಯೋಜನೆ ಪೂರ್ಣಗೊಂಡರೆ ಬಳ್ಳಾರಿ ನಗರದಲ್ಲೇ ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
50 ತಿಂಗಳ ಅಭಿವೃದ್ಧಿ ಕಾರ್ಯ 20 ತಿಂಗಳಲ್ಲಿ ಪೂರ್ಣ:
ಬಳ್ಳಾರಿಯನ್ನು ಇಡೀ ದೇಶವೇ ತಿರುಗಿ ನೋಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ರಸ್ತೆ, ಶಿಕ್ಷಣ ಹಾಗೂ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಮುಂದಿನ 20 ತಿಂಗಳಲ್ಲಿ ಸುಮಾರು 50 ತಿಂಗಳಲ್ಲಿ ಆಗಬೇಕಾದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.



