ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಸುಹಾಸ್ ಸುಧಾಕರ್ ಸ್ಪರ್ಧಿಸಲಿದ್ದು, ತಾಲೂಕಿನ ಜನತೆ ತಾಯಿಯಂತೆ ಹರಸಿ ಆಶೀರ್ವದಿಸಬೇಕು" ಎಂದು ದಿ. ಮಾಜಿ ಸಚಿವ ಡಿ. ಸುಧಾಕರ್ ಅವರ ಪತ್ನಿ ಹರ್ಷಿಣಿ ಸುಧಾಕರ್ ಮನವಿ ಮಾಡಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಾರ್ಡ್ ಅಧ್ಯಕ್ಷರು, ಪ್ರಮುಖ ಮುಖಂಡರು ಹಾಗೂ ನಗರಸಭೆ ಸದಸ್ಯರ ಚುನಾವಣೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸುಧಾಕರ್ ನೀಡಿದಷ್ಟೇ ಬೆಂಬಲ ಸುಹಾಸ್‌ಗೂ ಇರಲಿ:
"ನನ್ನ ಪತಿ ಡಿ. ಸುಧಾಕರ್ ಅವರ ಅಕಾಲಿಕ ಮರಣ ಕೇವಲ ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಅವರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸಾವಿರಾರು ಕಾರ್ಯಕರ್ತರಿಗೆ ಆಘಾತ ತಂದಿದೆ. ಈಗ ಹಿರಿಯೂರು ಕ್ಷೇತ್ರದ ಜನರ ಸೇವೆಗಾಗಿ ನನ್ನ ಮಗ ಸುಹಾಸ್ ಸುಧಾಕರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾನೆ. ಹಿಂದೆ ಸುಧಾಕರ್ ಅವರಿಗೆ ನೀಡಿದಷ್ಟೇ ಪ್ರೀತಿ, ಬೆಂಬಲವನ್ನು ಸುಹಾಸ್‌ಗೂ ನೀಡಿ, ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಡಿ" ಎಂದು ಹರ್ಷಿಣಿ ಸುಧಾಕರ್ ಭಾವುಕರಾಗಿ ನುಡಿದರು.
ಕ್ಷೇತ್ರದ ಜನರ ಋಣ ನಮ್ಮ ಮೇಲಿದೆ:
"ಸುಧಾಕರ್ ಅವರು ಶಾಸಕರಾಗಿ, ಮಂತ್ರಿಗಳಾಗಿದ್ದಾಗ ಹಿರಿಯೂರು ಕ್ಷೇತ್ರಕ್ಕೆ ಹಲವಾರು ಜನಪರ ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡಿ ಅನೇಕ ವಿದ್ಯಾಲಯಗಳನ್ನು ಮಂಜೂರು ಮಾಡಿಸಿದ್ದಾರೆ. ಬಡವರು ಸಹಾಯ ಕೇಳಿ ಬಂದರೆ ನಿರೀಕ್ಷೆಗೂ ಮೀರಿ ನೆರವಾಗುತ್ತಿದ್ದರು. ಮೂರು ಬಾರಿ ಅಧಿಕಾರ ನೀಡಿದ ಈ ತಾಲೂಕಿನ ಜನರ ಋಣ ನಮ್ಮ ಮೇಲಿದೆ" ಎಂದು ಹರ್ಷಿಣಿ ಸುಧಾಕರ್ ಸ್ಮರಿಸಿದರು.
"ನನಗೆ ಎರಡು ಲಕ್ಷ ಜನರಿದ್ದಾರೆ ಎಂದಿದ್ದರು ಅಪ್ಪ":
ಸಭೆಯಲ್ಲಿ ಮಾತನಾಡಿದ ದಿ. ಡಿ. ಸುಧಾಕರ್ ಅವರ ಪುತ್ರಿ ಸ್ಪೂರ್ತಿ, ತಂದೆಯೊಂದಿಗಿನ ಹಳೆಯ ನೆನಪನ್ನು ಹಂಚಿಕೊಂಡು ಕಣ್ಣೀರಾದರು.
"ಒಮ್ಮೆ ನಾನು ನಮ್ಮ ತಂದೆಯವರ ಬಳಿ, 'ನನ್ನ ಸ್ನೇಹಿತರ ತಂದೆಯಂದಿರು ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ, ನೀವು ನಮ್ಮನ್ನು ಕರೆದುಕೊಂಡು ಹೋಗುವುದಿಲ್ಲವೇಕೆ?' ಎಂದು ಕೇಳಿದ್ದೆ. ಆಗ ಅಪ್ಪ, 'ನಿಮ್ಮ ಸ್ನೇಹಿತೆಯ ತಂದೆಗೆ ಎಷ್ಟು ಜನ ಮಕ್ಕಳಿದ್ದಾರೆ?' ಎಂದು ಕೇಳಿದರು. ನಾನು 'ಇಬ್ಬರು' ಎಂದೆ. ಅದಕ್ಕೆ ನಮ್ಮ ಅಪ್ಪ, 'ನನಗೆ ಕೇವಲ ಇಬ್ಬರಲ್ಲಮ್ಮ, ಹಿರಿಯೂರು ಕ್ಷೇತ್ರದಲ್ಲಿ ಎರಡು ಲಕ್ಷ ಜನ ಮಕ್ಕಳಿದ್ದಾರೆ' ಎಂದಿದ್ದರು. ಕ್ಷೇತ್ರ ಹಾಗೂ ಇಲ್ಲಿನ ಜನರ ಮೇಲೆ ಅವರಿಗೆ ಅಷ್ಟೊಂದು ಪ್ರೀತಿ ಇತ್ತು."
"ನಮ್ಮ ತಂದೆ ಕ್ಷೇತ್ರದ ವಿದ್ಯಾರ್ಥಿಗಳ ಮತ್ತು ಬಡವರ ಸೇವೆಯಲ್ಲೇ ಜೀವನ ಕಳೆದಿದ್ದಾರೆ. ತಾಲೂಕಿನ ಜನತೆ ನಮ್ಮ ತಂದೆಯ ಮೇಲೆ ಇಟ್ಟಿದ್ದ ಪ್ರೀತಿ-ವಿಶ್ವಾಸವನ್ನು ನನ್ನ ತಮ್ಮ ಸುಹಾಸ್ ಮೇಲೂ ಇಟ್ಟು ಆಶೀರ್ವದಿಸಬೇಕು" ಎಂದು ಕೈಮುಗಿದು ಬೇಡಿಕೊಂಡರು.
ಈ ಪೂರ್ವಭಾವಿ ಸಭೆಯಲ್ಲಿ ದಿ. ಡಿ.ಸುಧಾಕರ್ ಅವರ ಅಣ್ಣ ಕುಮಾರ್, ಸಂಬಂಧಿ ಅಜಿತ್ ಕುಮಾರ್, ಅಳಿಯ ನಿತೀಶ್, ಪುತ್ರಿ ಸ್ಪೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪಕ್ಷದ ಮುಖಂಡರು, ನಗರಸಭೆಯ ಮಾಜಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ವಾರ್ಡ್‌ಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದು, ಮುಂಬರುವ ಚುನಾವಣಾ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.



