ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ರಾಜ್ಯೋತ್ಸವ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕನ್ನಡ ಭಾಷಿಕರು ಭಿನ್ನಭಿನ್ನ ಆಡಳಿತ ಘಟಕಗಳಲ್ಲಿ ಸೇರಿ, ತೊಂದರೆಯಲ್ಲಿದ್ದರು. ಭಾಷೆಗಳ ಆಧಾರದಲ್ಲಿ ರಾಜ್ಯಗಳನ್ನು ರಚಿಸಬೇಕು ಎಂಬ ಒತ್ತಾಯದ ಹಿನ್ನಲೆಯಲ್ಲಿ ಫಜಲ್ ಆಲಿ ಆಯೋಗ 1954 ರಲ್ಲಿ ರಚನೆಗೊಂಡಿತು. ವ್ಯಾಪಕ ಚರ್ಚೆಗಳ ತರುವಾಯ ಭಾಷೆಗಳ ಆಧಾರದಲ್ಲಿ 1956ರ ನವೆಂಬರ್ 1 ರಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಮಧ್ಯ ಪ್ರದೇಶ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.
ಮೈಸೂರು ಸಂಸ್ಥಾನದ ಒಂಬತ್ತು ಜಿಲ್ಲೆಗಳ ಜೊತೆ, ಮದರಾಸು, ಬಾಂಬೆ, ಹೈದರಾಬಾದ ಪ್ರಾಂತ್ಯಗಳಲ್ಲಿ ಸೇರಿಕೊಂಡಿದ್ದ ಹಲವು ಕನ್ನಡ ಪ್ರದೇಶಗಳನ್ನು ಜೋಡಿಸಲಾಯಿತು. ಜೊತೆಗೆ ಜಮಖಂಡಿ, ಜತ್, ಸಾಂಗಲಿ, ಮೀರಜ್, ಸವಣೂರು, ರಾಮದುರ್ಗ ಮೊದಲಾದ ಸಂಸ್ಥಾನಗಳನ್ನೂ ಕೂಡಿಸಲಾಯಿತು. ಹೀಗೆ ಸುಮಾರು 20 ಪ್ರದೇಶಗಳಲ್ಲಿನ ಕನ್ನಡ ನೆಲಗಳನ್ನು ಕೂಡಿಸಿ ಕಟ್ಟಿದ ನಾಡು ಕರ್ನಾಟಕ.
ರಾಜ್ಯೋತ್ಸವದ ಈ ಸಂದರ್ಭದಲ್ಲಿ ಏಕೀಕರಣ ಪ್ರಜ್ಞೆಯನ್ನು ಬೆಳೆಸಿದ ಅನೇಕರನ್ನು ನೆನಪಿಸಿಕೊಳ್ಳಬೇಕು. ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣ ರಾವ್, ಜಯದೇವಿ ತಾಯಿ ಲಿಗಾಡೆ, ಬಳ್ಳಾರಿ ಸಿದ್ದಮ್ಮ ಸೇರಿದಂತೆ ಹಲವು ಮಂದಿ ಮಹನೀಯರು ಕನ್ನಡಿಗರನ್ನು ಒಟ್ಟುಗೂಡಿಸಲು ಶ್ರಮಿಸಿದ್ದಾರೆ.
ನಿಜಲಿಂಗಪ್ಪನವರು ಕನ್ನಡ ನೆಲಗಳನ್ನು ಒಟ್ಟುಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ಕಟ್ಟುಲು ದುಡಿದಿದ್ದಾರೆ. ಏಕೀರಣ ಆದ ಕಾಲಕ್ಕೆ ಅವರೇ ಮುಖ್ಯಮಂತ್ರಿಯೂ ಆಗಿದ್ದರು. ದೇವರಾಜ್ ಅರಸರು ರಾಜ್ಯಕ್ಕೆ ‘ಕರ್ನಾಟಕ’ ಹೆಸರು ಕೊಟ್ಟು ಸಹಕರಿಸಿದ್ದಾರೆ. ಹೀಗೆ ಸಾವಿರಾರು ಕೈಗಳು ಕೂಡಿದ್ದರಿಂದ ನಮ್ಮ ರಾಜ್ಯ ಈ ರೂಪದಲ್ಲಿ ನಮ್ಮ ಮುಂದಿದೆ.
ಈ ಬಗೆಯ ಚಾರಿತ್ರಿಕ ಸಂಗತಿಗಳನ್ನು ನಾವು ಮೆಲುಕು ಹಾಕವುದು ಜವಾಬ್ದಾರಿ ಸರಿ. ಆದರೆ ರಾಜ್ಯೋತ್ಸವ ಭಾಷಣಕಾರನಾಗಿ ನನ್ನನ್ನು ಮುಳಬಾಗಿಲು ತಾಲ್ಲೂಕಿನ ಎನ್ ವಡ್ಡಿಹಳ್ಳಿಯ ಡೆಕ್ಕನ್ ಶಾಲೆಯವರು ಕರೆದಾಗ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಲೆಂದು ಪಠ್ಯೇತರ ಓದಿನ ಅಗತ್ಯವನ್ನೂ ಒತ್ತಿ ಹೇಳಿದೆ.
ಕನ್ನಡದಲ್ಲಿ ಓದಲೇಬೇಕಾದ ಹಲವು ಕೃತಿಗಳನ್ನು ಹೆಸರಿಸಿ ಓದಲು ಪ್ರೇರೇಪಿಸಿದೆ. ಓದು ನಮ್ಮ ಸಣ್ಣತನಗಳನ್ನು ಕರಗಿಸುತ್ತದೆಂದೂ, ಜಾತಿ-ಧರ್ಮಗಳ ತಾರತಮ್ಯ ಕಡಿಮೆಯಾಗುವುದೆಂದೂ ಹೇಳಿದೆ. ಹಾಗೆಯೇ ಒಳ್ಳೆಯ ಸಾಹಿತ್ಯ ಕೃತಿಗಳು ನಮ್ಮಲ್ಲಿ ಮಾನವೀಯ ಅಂತಃಕರಣವನ್ನು ಉದ್ದೀಪಿಸುತ್ತವೆಂತಲೂ ಹೇಳಿದೆ. ಕೊನೆಗೆ ಸಮಸಮಾಜದ ಆಶಯವಿರುವ ನಮ್ಮ ‘ಅಸ್ಪೃಶ್ಯತೆ ಮುಕ್ತ ಭಾರತ’ ಪ್ರತಿಜ್ಞೆಯನ್ನು ಬೋಧಿಸಿದೆ.
ವರದಿ-ಡಾ.ಶಿವಪ್ಪ ಅರಿವು.




