ಚಂದ್ರವಳ್ಳಿ ನ್ಯೂಸ್, ಲಕ್ನೋ:
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಅಂತಿಮಗೊಳ್ಳುವ ಮುನ್ನವೇ, ಎಸ್ಪಿ ತನ್ನ ಐದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏಕಪಕ್ಷೀಯವಾಗಿ ಪ್ರಕಟಿಸಿದೆ.
ದೆಹಲಿಯಲ್ಲಿ ಉಭಯ ಪಕ್ಷಗಳ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಿರುವಾಗಲೇ ಹೊರಬಿದ್ದಿರುವ ಈ ಅನಿರೀಕ್ಷಿತ ನಿರ್ಧಾರವು ಮೈತ್ರಿಯಲ್ಲಿ ಬಿರುಕು ಮೂಡಿಸಿದೆ.
ಘೋಷಣೆಯ ಹಿಂದಿನ ಕಾರಣ: ಕಾಂಗ್ರೆಸ್ನ ಕೆಲವು ನಾಯಕರು ಮಾಧ್ಯಮಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಮೈತ್ರಿ ಮಾತುಕತೆಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಎಸ್ಪಿ ವಲಯದಿಂದ ಕೇಳಿಬಂದಿದೆ. ಇಂಡಿಯಾ ಒಕ್ಕೂಟದ ಭಾಗವಾಗಿದ್ದರೂ, ಉತ್ತರ ಪ್ರದೇಶದಲ್ಲಿ ತನ್ನದೇ ಮೇಲುಗೈ ಎಂಬ ಸಂದೇಶ ರವಾನಿಸಲು ಮತ್ತು ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಲು ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಈ ತಂತ್ರ ಅನುಸರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನ: ಎಸ್ಪಿಯ ಈ ನಡೆಯನ್ನು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್ ತೀವ್ರವಾಗಿ ಖಂಡಿಸಿದ್ದಾರೆ. "ದೆಹಲಿಯಲ್ಲಿ ಮೈತ್ರಿ ಕುರಿತು ಚರ್ಚೆ ನಡೆಯುತ್ತಿರುವಾಗ ಲಕ್ನೋದಿಂದ ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸುವುದಾದರೆ ಮಾತುಕತೆಗೆ ಏನು ಅರ್ಥವಿದೆ? ಎಸ್ಪಿ ನೀಡಲು ಮುಂದಾಗಿರುವ 26 ಸೀಟುಗಳ ಪ್ರಸ್ತಾವನೆ ನಮಗೆ ಬೇಡ, ನಾವೇನು ಭಿಕ್ಷುಕರಲ್ಲ," ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಮೈತ್ರಿ ಉಳಿಸಿಕೊಳ್ಳುವ ಕಸರತ್ತು: ಮೂಲಗಳ ಪ್ರಕಾರ, ಕಾಂಗ್ರೆಸ್ 60ಕ್ಕೂ ಹೆಚ್ಚು ಕ್ಷೇತ್ರಗಳ ನಿರೀಕ್ಷೆಯಲ್ಲಿದ್ದರೆ, ಎಸ್ಪಿ ಕೇವಲ 26 ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧವಿದೆ. ಇದೇ ವಿಚಾರವಾಗಿ ಮಾತುಕತೆಯ ಮೂರನೇ ದಿನದಂದು ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಆದರೆ, ಮೈತ್ರಿ ಮುರಿದುಬಿದ್ದರೆ ಉತ್ತರ ಪ್ರದೇಶದಲ್ಲಿ ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ಅವರ ಮೈತ್ರಿಯು ಎಸ್ಪಿ ಹಾಗೂ ಕಾಂಗ್ರೆಸ್ಗೆ ದೊಡ್ಡ ಮಟ್ಟದ ನಷ್ಟ ಉಂಟುಮಾಡಬಹುದು ಎಂಬ ರಾಜಕೀಯ ಲೆಕ್ಕಾಚಾರವಿದೆ.
ಹೀಗಾಗಿ ಎಸ್ಪಿಯನ್ನು ಎದುರು ಹಾಕಿಕೊಳ್ಳಲು ಇಚ್ಛಿಸದ ಕಾಂಗ್ರೆಸ್ನ ವರಿಷ್ಠರು, ಸದ್ಯಕ್ಕೆ ಮೃದು ಧೋರಣೆ ತಾಳಿದ್ದು, ಕೇಂದ್ರ ನಾಯಕತ್ವದೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.




