ಚಂದ್ರವಳ್ಳಿ ನ್ಯೂಸ್, ಕೊಪ್ಪಳ (ಮುನಿರಾಬಾದ್):
"ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮೂರೂ ರಾಜ್ಯಗಳು ಸೇರಿ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಂಡಿವೆ. ನಾವು ಇತಿಹಾಸವನ್ನು ಮರೆಯುವವರಲ್ಲ, ಇತಿಹಾಸವನ್ನು ಓದುವವರಲ್ಲ, ಬದಲಿಗೆ ಇತಿಹಾಸವನ್ನು ಸೃಷ್ಟಿಸುವವರು," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಮ್ಮೆಯಿಂದ ಘೋಷಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ 'ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ' ಸಮಾರಂಭದಲ್ಲಿ ಅವರು ಭಾವುಕರಾಗಿ ಮಾತನಾಡಿದರು.
'ನಮ್ಮ ನೀರು ನಮ್ಮ ಹಕ್ಕು': ಮೂರು ರಾಜ್ಯಗಳ ಒಮ್ಮತ:
"ಜಲಸಂಪನ್ಮೂಲ ಇಲಾಖೆಯ ಇತಿಹಾಸದಲ್ಲೇ ಇಂದು ಅತ್ಯಂತ ಪ್ರಮುಖ ದಿನ. 'ನಮ್ಮ ನೀರು ನಮ್ಮ ಹಕ್ಕು' ಎಂಬ ಘೋಷಣೆಯಡಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರ ಹಿತ ಕಾಯುವ ನಿಟ್ಟಿನಲ್ಲಿ ದೊಡ್ಡ ನಿರ್ಧಾರಕ್ಕೆ ಬರಲಾಗಿದೆ. ನವಲಿ ಡ್ಯಾಂ ನಿರ್ಮಾಣ ಇರಬಹುದು ಅಥವಾ ಜಲಾಶಯದ ಹೂಳು ತೆಗೆಯುವ ವಿಚಾರ ಇರಬಹುದು, ಎಲ್ಲದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ರೈತರ ರಕ್ಷಣೆಗಾಗಿ ನಾವೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದು, ಅಂತಿಮ ನಿರ್ಧಾರಗಳನ್ನು ಕೇಂದ್ರ ಸಚಿವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ," ಎಂದು ಸಿಎಂ ತಿಳಿಸಿದರು.
"ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ!":
ವೇದಿಕೆಯಲ್ಲಿ ತತ್ವಜ್ಞಾನದ ಮಾತುಗಳನ್ನಾಡಿದ ಡಿ.ಕೆ. ಶಿವಕುಮಾರ್, "ದೇವರು ನಮಗೆ ಎರಡು ಆಯ್ಕೆಗಳನ್ನು ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಇಲ್ಲವೇ ಬಿಟ್ಟು ಹೋಗುವುದು. ದೇವರು ಯಾರಿಗೂ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಕೇವಲ ಅವಕಾಶವನ್ನು ಮಾತ್ರ ನೀಡುತ್ತಾನೆ. ಬದುಕಿನಲ್ಲಿ ಹೆಜ್ಜೆಯ ಗುರುತುಗಳನ್ನು, ಸಾಕ್ಷಿ ಗುಡ್ಡಗಳನ್ನು ಉಳಿಸಿ ಹೋಗಲು ಸಿಕ್ಕಿರುವ ಈ ಅವಕಾಶದಲ್ಲಿ ಜನಸಾಮಾನ್ಯರ ಹಾಗೂ ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ," ಎಂದರು.
ಅಂದು ಮಧ್ಯರಾತ್ರಿ ಫೋನ್ ಬಂದಾಗ... 19ನೇ ಗೇಟ್ ದುರಂತದ ನೆನಪು! ಕಳೆದ ವರ್ಷ ಜಲಾಶಯದ 19ನೇ ಗೇಟ್ ಮುರಿದುಬಿದ್ದ ಭೀಕರ ಸಂದರ್ಭವನ್ನು ನೆನೆದ ಸಿಎಂ:
"ಅಂದು ಮಧ್ಯರಾತ್ರಿ ಜಿಲ್ಲಾ ಸಚಿವರು ಹಾಗೂ ಅಧಿಕಾರಿಗಳು ಫೋನ್ ಮಾಡಿ ಡ್ಯಾಂ ಶೇಕ್ ಆಗುತ್ತಿರುವ ಪರಿಸ್ಥಿತಿಯನ್ನು ವಿವರಿಸಿದ್ದರು. ನಾನು ತಕ್ಷಣವೇ ಕಾರ್ಯಪ್ರವೃತ್ತನಾಗಿ ಬೆಳಗ್ಗೆ 6 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹೊರಟು, 8:30ರ ಹೊತ್ತಿಗೆ ಡ್ಯಾಂ ಸ್ಥಳದಲ್ಲಿದ್ದೆ. ಕೇವಲ 10-15 ದಿನಗಳಲ್ಲಿ 19ನೇ ಗೇಟನ್ನು ಯಶಸ್ವಿಯಾಗಿ ಬದಲಾಯಿಸುವ ಮೂಲಕ ಈ ಭಾಗದ ರೈತರ ಕಣ್ಣೀರನ್ನು ಒರೆಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆಗ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಆದರೆ ಶಾರದಾ ದೇವಿ, ಹುಲಿಗೆಮ್ಮ, ಹಂಪಿ ವಿರೂಪಾಕ್ಷ ಹಾಗೂ ರಾಘವೇಂದ್ರ ಸ್ವಾಮಿಯ ಆಶೀರ್ವಾದದಿಂದ ಇವತ್ತು ಎಲ್ಲಾ 33 ಗೇಟುಗಳನ್ನು ಬದಲಾಯಿಸುವ ದಿಟ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಯಿತು" ಎಂದು ಸಿಎಂ ಶಿವಕುಮಾರ್ ಭಾವುಕರಾದರು.
"ರೈತನಿಗೆ ಸಂಬಳವಿಲ್ಲ, ರಜೆಯೂ ಇಲ್ಲ!" - ಒಗ್ಗಟ್ಟಿನ ಮಂತ್ರ:
"ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು" ಎಂಬ ತತ್ವವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಈ ಒಗ್ಗಟ್ಟಿನ ಮೂಲಕ 33 ಟಿಎಂಸಿ ನೀರನ್ನು ಉಳಿಸುವ ಹಾಗೂ ಡ್ಯಾಂ ಅನ್ನು ಸಂಪೂರ್ಣವಾಗಿ ರಕ್ಷಿಸುವ ಭರವಸೆ ನೀಡಿದರು.
"ರೈತನಿಗೆ ಸಂಬಳವಿಲ್ಲ, ಪ್ರಮೋಷನ್ ಇಲ್ಲ, ಪೆನ್ಷನ್ ಇಲ್ಲ, ರಜೆಯೂ ಇಲ್ಲ ಹಾಗೂ ನಿವೃತ್ತಿಯೂ ಇಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ಉಳಿಸಬೇಕು ಮತ್ತು ಈ ಭಾಗದ ಭತ್ತದ ಕಣಜವನ್ನು ಕಾಪಾಡಬೇಕು ಎಂಬ ದೃಢ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ. ನಾನು ಎಂದಿಗೂ ರೈತರ ಸೇವಕ ಮತ್ತು ಬಂಧುವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ," ಎಂದು ಸಿಎಂ ಭರವಸೆ ನೀಡಿದರು.



