ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಶುಭ ಸುದ್ದಿ ಸಿಕ್ಕಿದ್ದು, ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ 16 ಬೋಗಿಗಳ 'ವಂದೇ ಭಾರತ್‌ಎಕ್ಸ್‌ಪ್ರೆಸ್' ರೈಲಿನ ಪ್ರಾಯೋಗಿಕ ಸಂಚಾರವನ್ನು (ಟ್ರಯಲ್ ರನ್) ಸೆಪ್ಟೆಂಬರ್ 5 (ಶನಿವಾರ) ರಂದು ನಡೆಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.
ರೈಲ್ವೆ ಮಂಡಳಿಯ ನಿರ್ದೇಶನದಂತೆ ಈ ಪ್ರಾಯೋಗಿಕ ಕಾರ್ಯಾಚರಣೆ ನಡೆಯುತ್ತಿದ್ದು, ಶನಿವಾರ ಬೆಳಿಗ್ಗೆ ಯಶವಂತಪುರದಿಂದ ಹೊರಡುವ 16 ಕೋಚ್‌ಗಳ ಈ ರೈಲು ಮಧ್ಯಾಹ್ನ ಮಂಗಳೂರು ಸೆಂಟ್ರಲ್‌ತಲುಪಿ, ಬಳಿಕ ಅದೇ ದಿನ ಸಂಜೆ ವಾಪಸ್‌ಬೆಂಗಳೂರಿಗೆ ಬರಲಿದೆ.
ಪ್ರಾಯೋಗಿಕ ಸಂಚಾರದ ತಾತ್ಕಾಲಿಕ ವೇಳಾಪಟ್ಟಿ:
ಯಶವಂತಪುರ - ಮಂಗಳೂರು ಸೆಂಟ್ರಲ್:
ಯಶವಂತಪುರದಿಂದ ಹೊರಡುವುದು: ಬೆಳಿಗ್ಗೆ 06:05
ಹಾಸನ: ಬೆಳಿಗ್ಗೆ 09:00 / 09:05
ಸಕಲೇಶಪುರ: ಬೆಳಿಗ್ಗೆ 09:55 / 10:00
ಸುಬ್ರಹ್ಮಣ್ಯ ರಸ್ತೆ: ಮಧ್ಯಾಹ್ನ 12:30 / 12:35
ಪಡೀಲ್: ಮಧ್ಯಾಹ್ನ 01:50
ಮಂಗಳೂರು ತಲುಪುವುದು: ಮಧ್ಯಾಹ್ನ 02:25
ಮಂಗಳೂರು ಸೆಂಟ್ರಲ್ - ಯಶವಂತಪುರ:
ಮಂಗಳೂರಿನಿಂದ ಹೊರಡುವುದು: ಮಧ್ಯಾಹ್ನ 03:00
ಪಡೀಲ್: ಮಧ್ಯಾಹ್ನ 03:25
ಸುಬ್ರಹ್ಮಣ್ಯ ರಸ್ತೆ: ಸಂಜೆ 04:30 / 04:35
ಸಕಲೇಶಪುರ: ಸಂಜೆ 06:30 / 06:35
ಹಾಸನ: ರಾತ್ರಿ 07:20 / 07:30
ಯಶವಂತಪುರ ತಲುಪುವುದು: ರಾತ್ರಿ 11:00
ಸುರಕ್ಷತೆ ಮತ್ತು ಪ್ರಯಾಣದ ಸಮಯ ಕಡಿತಕ್ಕೆ ಸೂಚನೆ:
ಪ್ರಾಯೋಗಿಕ ಸಂಚಾರದ ವೇಳೆ ಎಂಜಿನಿಯರಿಂಗ್, ಮೆಕ್ಯಾನಿಕಲ್ ಹಾಗೂ ಸಿಗ್ನಲಿಂಗ್ ವಿಭಾಗದ ಜಂಟಿ ಅಧಿಕಾರಿಗಳ ತಂಡ ರೈಲಿನಲ್ಲಿ ಪ್ರಯಾಣಿಸಲಿದೆ. ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವಿನ ಕಡಿದಾದ ಘಾಟ್ ಪ್ರದೇಶದಲ್ಲಿ ರೈಲಿನ ಕಾರ್ಯಕ್ಷಮತೆ, ವೇಗ ಹಾಗೂ ಸುರಕ್ಷತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು.
ಪ್ರಸ್ತುತ ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಪ್ರಯಾಣದ ಅವಧಿ ಕೊಂಚ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿರುವ ರೈಲ್ವೆ ಮಂಡಳಿಯು, ಸುರಕ್ಷತಾ ನಿಯಮಗಳಿಗೆ ಧಕ್ಕೆಯಾಗದಂತೆ ಪ್ರಯಾಣದ ಅವಧಿಯನ್ನು ಮತ್ತಷ್ಟು ಕಡಿತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಕಾರ್ಯಾಚರಣೆ ವಿಭಾಗಕ್ಕೆ ಸೂಚಿಸಿದೆ. ಟ್ರಯಲ್ ರನ್ ಪೂರ್ಣಗೊಂಡ ತಕ್ಷಣ ವರದಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




