Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣ ಹೆಚ್ಚಿದರೂ ಸಂಸ್ಕಾರ ಕಡಿಮೆಯಾದರೆ ಜ್ಞಾನ ನಿಷ್ಫಲ:

Advertisement
Advertisement

ಚಂದ್ರವಳ್ಳಿ ನ್ಯೂಸ್, ಮೈಸೂರು:
"ಶಿಕ್ಷಣವು ವ್ಯಕ್ತಿಗೆ ಜ್ಞಾನ ನೀಡುತ್ತದೆ. ಸಂಸ್ಕಾರವು ಆ ಜ್ಞಾನಕ್ಕೆ ಮೌಲ್ಯ ನೀಡುತ್ತದೆ. ಹಿರಿಯರನ್ನು ತಿರಸ್ಕರಿಸುವ ಮನೋಭಾವ ಕೊನೆಗೆ ವ್ಯಕ್ತಿಯನ್ನೇ ಏಕಾಂಗಿಯಾಗಿಸುತ್ತದೆ." 

ವಿದ್ಯೆ ಬೆಳೆದು ವಿನಯವೇ ಇಲ್ಲ
ಜೀವನದ ದಾರಿ ಬೆಳಗದು ಅಲ್ಲ
ಹಿರಿಯರ ಮಾತು ಗೌರವಿಸಿದರೆ
ಭವಿಷ್ಯದ ಬದುಕು ಬೆಳಗುವುದೆಲ್ಲ.

ಶಿಕ್ಷಣವೆಂದರೆ ಕೇವಲ ಕಲಿಯುವುದು ಮಾತ್ರವಲ್ಲ, ಅದು ಸಂಸ್ಕಾರವೂ ಹೌದು, ಅದೇ ಜೀವನದ ನಿಜವಾದ ಸಾಕ್ಷಾತ್ಕಾರ. ಈ ಕಲಿಕೆ ಬದುಕಿನಲ್ಲಿ ಹಲವಾರು ಬದಲಾವಣೆಗಳಿಗೆ ಪೂರಕವಾಗಿದ್ದು, ಪ್ರೇರಣೆಯಾಗಿ ಕಾರ್ಯನಿರ್ವಹಿಸಬೇಕು. ಆದರೆ ಅದು ಆಗದೆ ಕೆಡುಕುಗಳಿಗೆ ಶರಣಾದರೆ, ಶಿಕ್ಷಣವೇ ಒಂದು ಆಭರಣವಾದರೂ ಇಡೀ ಜೀವನ ಹರಣವಾಗುವ ಅಪಾಯವಿದೆ.

ಮರಣಕ್ಕಿಂತ ಮೊದಲು ಎಚ್ಚೆತ್ತು ಶಿಷ್ಟಾಚಾರದಿಂದ ನಡೆದು ಬಾಳಿದರೆ ಬದುಕು ಶ್ರೇಯಸ್ಕರವಾಗುತ್ತದೆ, ಇಲ್ಲವಾದರೆ ಅದು ವಿನಾಶಕಾರಿಯಾಗುತ್ತದೆ. ಆದ್ದರಿಂದ ಜ್ಞಾನವನ್ನು ಪಡೆದವರು ಕೆಡುಕುಗಳ ಗಾಳಿಗೆ ತೂರಿಹೋಗದೆ, ಕೆಡುಕುಗಳಿಗೆ ಸದ್ಗುಣಗಳ ಮದ್ದನ್ನು ನೀಡುವ ಮನೋಭಾವ ಬೆಳೆಸಬೇಕು. ಆಗ ಮಾತ್ರ ಕಲಿತ ಶಿಕ್ಷಣ ಸಾರ್ಥಕವಾಗುತ್ತದೆ.

ಶಿಕ್ಷಣಕ್ಕೆ ಸಂಸ್ಕಾರ ಸೇರದಿದ್ದರೆ ಜ್ಞಾನವು ಅಹಂಕಾರವಾಗಿ ರೂಪಾಂತರ ಗೊಳ್ಳುತ್ತದೆ. ಹಿರಿಯರ ಅನುಭವವನ್ನು ತಿರಸ್ಕರಿಸುವವರು ಜೀವನದ ಕಠಿಣ ಪಾಠಗಳನ್ನು ಅನುಭವದ ಮೂಲಕವೇ ಕಲಿಯಬೇಕಾಗುತ್ತದೆ. ವಿನಯವೇ ವಿದ್ಯೆಯ ನಿಜವಾದ ಆಭರಣವಾಗಿದ್ದು, ಅದು ವ್ಯಕ್ತಿತ್ವಕ್ಕೆ ಗೌರವವನ್ನು ತಂದುಕೊಡುತ್ತದೆ. ಇತರರಿಗೆ ಗೌರವ ನೀಡುವವರು ಸಮಾಜದಿಂದಲೂ ಗೌರವವನ್ನು ಪಡೆಯುತ್ತಾರೆ. ಇಂದು ಹಿರಿಯರನ್ನು ನಿರ್ಲಕ್ಷಿಸುವವರು ನಾಳೆ ತಾನೇ ಹಿರಿಯನಾದಾಗ ಅದೇ ನೋವು ಮತ್ತು ತಿರಸ್ಕಾರವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಶಿಕ್ಷಣದ ಜೊತೆಗೆ ಸಂಸ್ಕಾರ, ಜ್ಞಾನದ ಜೊತೆಗೆ ವಿನಯ ಮತ್ತು ಸಾಧನೆಯ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಇಂದು ಸಮಾಜದಲ್ಲಿ ಒಂದು ವಿಚಿತ್ರವಾದ ಬದಲಾವಣೆ ಕಾಣಿಸುತ್ತಿದೆ. ಶಿಕ್ಷಣದ ಮಟ್ಟ ಹೆಚ್ಚುತ್ತಿದೆ. ಪದವಿಗಳ ಸಂಖ್ಯೆ ಹೆಚ್ಚುತ್ತಿದೆ. ತಂತ್ರಜ್ಞಾನದ ಜ್ಞಾನ ಬೆಳೆಯುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಮಾನವೀಯತೆ, ವಿನಯ, ಹಿರಿಯರ ಮೇಲಿನ ಗೌರವ ಮತ್ತು ಕುಟುಂಬದ ಮೌಲ್ಯಗಳು ಬೆಳೆಯುತ್ತಿ ವೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ.ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಆತಂಕಕಾರಿ ಚಿತ್ರಣ ನಮ್ಮ ಕಣ್ಣ ಮುಂದೆ ಮೂಡುತ್ತದೆ. ವಿದ್ಯೆ ಹೆಚ್ಚಾದಂತೆ ವಿವೇಕವೂ ಹೆಚ್ಚಬೇಕು. ಜ್ಞಾನ ಬೆಳೆದಂತೆ ವಿನಯವೂ ಬೆಳೆಯಬೇಕು. ಆದರೆ ಕೆಲವರಲ್ಲಿ ಶಿಕ್ಷಣವು ವ್ಯಕ್ತಿತ್ವವನ್ನು ಬೆಳೆಸುವ ಬದಲು ಅಹಂಕಾರವನ್ನು ಬೆಳೆಸುತ್ತಿರುವುದು ವಿಷಾದದ ಸಂಗತಿಯಾಗಿದೆ.

ಶಿಕ್ಷಣ  ಇದೊಂದು  ಪುಸ್ತಕದ ಜ್ಞಾನವಲ್ಲ. ಅದು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಸಾಧನ. ಆದರೆ ಇಂದು ಕೆಲವರು ಪಡೆದ ಶಿಕ್ಷಣವನ್ನು ಇತರರನ್ನು ತಗ್ಗಿಸಿ ನೋಡುವ ಆಯುಧವನ್ನಾಗಿ ಬಳಸುತ್ತಿದ್ದಾರೆ. ಹಿರಿಯರ ಅನುಭವವನ್ನು ನಿರ್ಲಕ್ಷಿಸುತ್ತಿದ್ದಾರೆ. ಕುಟುಂಬದ ತ್ಯಾಗವನ್ನು ಮರೆತಿದ್ದಾರೆ. ತಾವು ಓದಿದ್ದೇವೆ ಎಂಬ ಕಾರಣಕ್ಕೆ ಎಲ್ಲವನ್ನೂ ತಿಳಿದವರು ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಇದು ಶಿಕ್ಷಣದ ಯಶಸ್ಸಲ್ಲ. ಶಿಕ್ಷಣದ ಸೋಲು. 

ಒಂದು ಮರದ ಬೇರು ನೆಲದೊಳಗೆ ಕಾಣಿಸದಿದ್ದರೂ ಮರವನ್ನು ನಿಲ್ಲಿಸುವ ಶಕ್ತಿ ಅದರಲ್ಲೇ ಇರುತ್ತದೆ. ಅದೇ ರೀತಿ ಕುಟುಂಬದ ಹಿರಿಯರು ಹೊರಗೆ ದೊಡ್ಡ ಸಾಧನೆ ಮಾಡದಿದ್ದರೂ ಅವರ ಅನುಭವ, ತ್ಯಾಗ ಮತ್ತು ಮಾರ್ಗದರ್ಶನವೇ ಕುಟುಂಬದ ಅಡಿಪಾಯವಾಗಿರುತ್ತದೆ. ಆದರೆ ಕೆಲವರು ಮರದ ಕೊಂಬೆ ಬೆಳೆದ ತಕ್ಷಣ ಬೇರಿನ ಮಹತ್ವವನ್ನು ಮರೆತುಬಿಡುವಂತೆಯೇ ಹಿರಿಯರ ಕೊಡುಗೆಯನ್ನು ಮರೆತುಬಿಡುತ್ತಾರೆ. ತಮ್ಮ ಬೆಳವಣಿಗೆಗೆ ಕಾರಣವಾದವರನ್ನೇ ಕಡೆಗಣಿಸುತ್ತಾರೆ.

ಇಂದು ಅನೇಕ ಮನೆಗಳಲ್ಲಿ ಕಾಣುವ ಸಮಸ್ಯೆಯೆಂದರೆ ತಲೆಮಾರುಗಳ ನಡುವಿನ ಅಂತರ. ಹಿರಿಯರು ಹೇಳುವ ಮಾತನ್ನು ಕೇಳಲು ಕೆಲವರಿಗೆ ತಾಳ್ಮೆಯಿಲ್ಲ. ಅವರು ನೀಡುವ ಸಲಹೆಯನ್ನು ಹಳೆಯ ಕಾಲದ ಮಾತು ಎಂದು ತಳ್ಳಿಹಾಕುತ್ತಾರೆ. ಅನುಭವದಿಂದ ಬಂದ ಎಚ್ಚರಿಕೆಯನ್ನು ಅಜ್ಞಾನವೆಂದು ಭಾವಿಸುತ್ತಾರೆ. ಆದರೆ ಜೀವನವು ಕೇವಲ ಪುಸ್ತಕಗಳಿಂದ ಕಲಿಯುವ ಪಾಠವಲ್ಲ. ಅದು ಅನುಭವಗಳಿಂದ ರೂಪುಗೊಳ್ಳುವ ವಿಶ್ವವಿದ್ಯಾಲಯ. ಅಲ್ಲಿ ಹಿರಿಯರೇ ನಿಜವಾದ ಶಿಕ್ಷಕರು.

news_1782346548_0_689.webp

 

ಕೆಲವರು "ನಾನು ಓದಿದ್ದೇನೆ. ನನಗೆ ಎಲ್ಲವೂ ಗೊತ್ತು. ನನ್ನ ಬದುಕಿಗೆ ಯಾರ ಸಹಾಯವೂ ಬೇಕಿಲ್ಲ" ಎಂಬ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಆದರೆ ಒಂದು ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಇಂದು ನಾವು ನಿಂತಿರುವ ಸ್ಥಾನಕ್ಕೆ ಕಾರಣ ಯಾರು? ಬಾಲ್ಯದಲ್ಲಿ ನಮ್ಮನ್ನು ಬೆಳೆಸಿದವರು ಯಾರು? ನಮ್ಮ ಶಿಕ್ಷಣಕ್ಕಾಗಿ ತಮ್ಮ ಆಸೆಗಳನ್ನು ಬದಿಗಿಟ್ಟವರು ಯಾರು? ಸಂಕಷ್ಟಗಳಲ್ಲಿ ನಮ್ಮ ಬೆನ್ನಿಗೆ ನಿಂತವರು ಯಾರು? ಉತ್ತರ ಒಂದೇ. ನಮ್ಮ ಕುಟುಂಬ ಮತ್ತು ನಮ್ಮ ಹಿರಿಯರು. ಅವರ ನೆರವಿಲ್ಲದೆ ನಾವು ಇಂದು ಇರುವ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತಿತ್ತೇ?.

ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ಯೋಗ್ಯ ಗುಣಗಳನ್ನು ದೌರ್ಬಲ್ಯ ವೆಂದು ಭಾವಿಸುವ ಪ್ರವೃತ್ತಿ.ವಿನಯದಿಂದ ಮಾತನಾಡುವವನನ್ನು ಕೆಲವರು ಬಲಹೀನನೆಂದು ಭಾವಿಸುತ್ತಾರೆ. ಸಹನೆಯಿಂದ ವರ್ತಿಸುವವನನ್ನು ಹೆದರಿಕೆ ಯವನೆಂದುಕೊಳ್ಳುತ್ತಾರೆ.ಗೌರವ ಕೊಡುವವನನ್ನು ಅಸಮರ್ಥನೆಂದು ನೋಡುತ್ತಾರೆ. ಆದರೆ ವಾಸ್ತವದಲ್ಲಿ ವಿನಯ ದುರ್ಬಲತೆಯಲ್ಲ. ಅದು ವ್ಯಕ್ತಿತ್ವದ ಶಕ್ತಿ. ಸಹನೆ ಭಯವಲ್ಲ. ಅದು ಆತ್ಮನಿಯಂತ್ರಣದ ಲಕ್ಷಣ. ಗೌರವ ಕೊಡುವುದು ಹೀನತೆ ಅಲ್ಲ. ಅದು ಸಂಸ್ಕಾರದ ಪ್ರತೀಕವಾದುದು.

ಕುಟುಂಬದಲ್ಲಿ ಎಲ್ಲರೂ ಒಂದೇ ರೀತಿಯ ಕೆಲಸ ಮಾಡುವುದಿಲ್ಲ. ಒಬ್ಬರು ದುಡಿದು ಹಣ ತರುತ್ತಾರೆ. ಮತ್ತೊಬ್ಬರು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಇನ್ನೊಬ್ಬರು ಕುಟುಂಬದ ಏಕತೆಯನ್ನು ಕಾಪಾಡುತ್ತಾರೆ. ಪ್ರತಿಯೊಬ್ಬರ ಕೊಡುಗೆ ವಿಭಿನ್ನ. ಆದರೆ ಕೆಲವರು "ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ" ಎಂಬ ಭಾವನೆ ಬೆಳೆಸಿಕೊಳ್ಳುತ್ತಾರೆ. ಇದು ಸಹಕಾರದ ಮನೋಭಾವವನ್ನು ಕುಗ್ಗಿಸುತ್ತದೆ. ಕುಟುಂಬವನ್ನು ಒಂದು ತಂಡದಂತೆ ನೋಡುವ ಬದಲು ಸ್ಪರ್ಧೆಯ ಮೈದಾನವನ್ನಾಗಿ ಮಾಡುತ್ತದೆ.

ಒಂದು ಉದಾಹರಣೆ ನೋಡೋಣ. ಒಬ್ಬ ಯುವಕ ಉತ್ತಮ ಶಿಕ್ಷಣ ಪಡೆದು ದೊಡ್ಡ ಹುದ್ದೆಗೆ ಏರುತ್ತಾನೆ. ಆ ಸಾಧನೆಯಿಂದ ಅವರಲ್ಲಿ ಅಹಂಕಾರ ಬೆಳೆಯುತ್ತದೆ. ತಂದೆತಾಯಿ ಹೇಳುವ ಮಾತನ್ನು ಕೇಳುವುದಿಲ್ಲ. ಹಿರಿಯರ ಸಲಹೆಯನ್ನು ಕಡೆಗಣಿಸುತ್ತಾರೆ. ತನ್ನ ಯಶಸ್ಸಿಗೆ ತಾನೇ ಕಾರಣ ಎಂದು ಭಾವಿಸುತ್ತಾರೆ. ಕೆಲವು ವರ್ಷಗಳ ನಂತರ ಅವನಿಗೂ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಆಗ ಅವನು ನೀಡುವ ಸಲಹೆಯನ್ನು ಅವರೇ ನಿರ್ಲಕ್ಷಿಸುತ್ತಾರೆ. ಅವನ ಅನುಭವವನ್ನು ಅವರು ತಿರಸ್ಕರಿಸುತ್ತಾರೆ. ಆಗ ಅವನಿಗೆ ನೋವಾಗುತ್ತದೆ. ಆದರೆ ಅವನು ಮರೆತಿರುವ ಸತ್ಯವೇನೆಂದರೆ ಇಂದು ತಾನು ಅನುಭವಿಸುತ್ತಿರುವುದು ನಿನ್ನೆ ತಾನು ಇತರರಿಗೆ ನೀಡಿದ ವರ್ತನೆಯ ಪ್ರತಿಫಲ.

ಜೀವನವು ಒಂದು ಚಕ್ರ. ಇಂದು ನಾವು ಯುವಕರು. ನಾಳೆ ನಾವು ಹಿರಿಯರಾಗುತ್ತೇವೆ. ಇಂದು ನಾವು ಕೇಳಲು ಇಷ್ಟಪಡದ ಮಾತನ್ನು ನಾಳೆ ಹೇಳುವ ಸ್ಥಿತಿಗೆ ಬರುತ್ತೇವೆ. ಇಂದು ನಾವು ನಿರ್ಲಕ್ಷಿಸುವ ಅನುಭವವನ್ನು ನಾಳೆ ನಾವು ಹೊಂದಿರುತ್ತೇವೆ. ಆದ್ದರಿಂದ ಹಿರಿಯರನ್ನು ತಿರಸ್ಕರಿಸುವ ಮೊದಲು ನಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು. ನಾವು ಬಿತ್ತಿದ ಬೀಜವೇ ಒಂದು ದಿನ ಮರವಾಗಿ ನಮ್ಮ ಮುಂದೆ ನಿಲ್ಲುತ್ತದೆ.

ಸಂಸ್ಕಾರವು ಮನೆಯಲ್ಲೇ ಆರಂಭವಾಗುತ್ತದೆ. ಮಕ್ಕಳಿಗೆ ಪುಸ್ತಕದ ಜ್ಞಾನ ನೀಡುವುದು ಮುಖ್ಯ. ಆದರೆ ಅದಕ್ಕಿಂತ ಮುಖ್ಯವಾದುದು ಮಾನವೀಯ ಮೌಲ್ಯಗಳನ್ನು ಕಲಿಸುವುದು. ಹಿರಿಯರನ್ನು ಗೌರವಿಸುವುದು, ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಸಹಕಾರದಿಂದ ಬದುಕುವುದು ಇವುಗಳೆಲ್ಲ ನಿಜವಾದ ಶಿಕ್ಷಣದ ಭಾಗಗಳು. ಇವು ಇಲ್ಲದಿದ್ದರೆ ಪದವಿಗಳು ಗೋಡೆಯ ಮೇಲಿನ ಪ್ರಮಾಣಪತ್ರಗಳಾಗಿ ಉಳಿಯುತ್ತವೆ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಪಡೆಯುವುದು ಸುಲಭವಾಗಿದೆ. ಆದರೆ ಮಾಹಿತಿಯೇ ಜ್ಞಾನವಲ್ಲ. ಜ್ಞಾನವೇ ಸಂಸ್ಕಾರವಲ್ಲ. ಸಂಸ್ಕಾರವೆಂದರೆ ಜೀವನವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮೌಲ್ಯಗಳ ಸಮೂಹ. ಅದು ವ್ಯಕ್ತಿಯನ್ನು ಸಮಾಜಕ್ಕೆ ಉಪಯುಕ್ತನನ್ನಾಗಿ ಮಾಡುತ್ತದೆ. ಶಿಕ್ಷಣ ವ್ಯಕ್ತಿಗೆ ಉದ್ಯೋಗ ನೀಡಬಹುದು. ಆದರೆ ಸಂಸ್ಕಾರವೇ ಗೌರವವನ್ನು ತಂದುಕೊಡುತ್ತದೆ.  ಹಿರಿಯರ ಅನುಭವವು ಬದುಕಿನ ನಕ್ಷೆ ಇದ್ದಂತೆ. ಆ ನಕ್ಷೆಯನ್ನು ಹರಿದು ಹಾಕಿ ದಾರಿ ಹುಡುಕಲು ಹೊರಟರೆ ತಪ್ಪಿಹೋಗುವ ಸಾಧ್ಯತೆ ಹೆಚ್ಚು. ಅನುಭವದ ಮೌಲ್ಯವನ್ನು ಅರಿತವನು ಅನೇಕ ತಪ್ಪುಗಳಿಂದ ಪಾರಾಗುತ್ತಾನೆ. ಅನುಭವವನ್ನು ನಿರ್ಲಕ್ಷಿಸಿದವನು ಅದೇ ತಪ್ಪುಗಳನ್ನು ಮರುಕಳಿಸುತ್ತಾನೆ.

ನಮ್ಮ ಸಮಾಜಕ್ಕೆ ಇಂದು ಅಗತ್ಯವಿರುವುದು ಹೆಚ್ಚಿನ ಪದವಿಗಳಲ್ಲ. ಹೆಚ್ಚಿನ ಮಾನವೀಯತೆ. ಹೆಚ್ಚಿನ ಅಹಂಕಾರವಲ್ಲ. ಹೆಚ್ಚಿನ ವಿನಯ. ಹೆಚ್ಚಿನ ಸ್ವಾರ್ಥವಲ್ಲ. ಹೆಚ್ಚಿನ ಕೃತಜ್ಞತೆ. ಶಿಕ್ಷಣ ಮತ್ತು ಸಂಸ್ಕಾರ ಒಂದಾಗಿ ಸಾಗಿದಾಗ ಮಾತ್ರ ಸಮಾಜ ಆರೋಗ್ಯಕರವಾಗುತ್ತದೆ. ಇಲ್ಲದಿದ್ದರೆ ಜ್ಞಾನ ಹೆಚ್ಚಿದರೂ ಸಂಬಂಧಗಳು ಕುಸಿಯುತ್ತವೆ. ಸಾಧನೆ ಹೆಚ್ಚಿದರೂ ಸಂತೋಷ ಕಡಿಮೆಯಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ನನ್ನ ಶಿಕ್ಷಣ ನನ್ನಲ್ಲಿ ವಿನಯ ಬೆಳೆಸಿದೆಯೇ. ನನ್ನ ಜ್ಞಾನ ನನ್ನಲ್ಲಿ ಗೌರವದ ಮನೋಭಾವ ಮೂಡಿಸಿದೆಯೇ. ನನ್ನ ಸಾಧನೆ ನನ್ನನ್ನು ಮಾನವೀಯತೆಯಿಂದ ದೂರ ಮಾಡುತ್ತಿದೆಯೇ. ಈ ಪ್ರಶ್ನೆಗಳಿಗೆ ಸತ್ಯವಾಗಿ ಉತ್ತರಿಸಿದಾಗ ಮಾತ್ರ ಶಿಕ್ಷಣದ ನಿಜವಾದ ಅರ್ಥ ಅರಿವಾಗುತ್ತದೆ.   ಹಿರಿಯರನ್ನು ಗೌರವಿಸುವುದು ಅವರ ವಯಸ್ಸಿಗೆ ನೀಡುವ ಗೌರವ ಮಾತ್ರವಲ್ಲ. ಅದು ಅವರ ಅನುಭವಕ್ಕೆ ಸಲ್ಲಿಸುವ ಗೌರವ. ಅದು ನಮ್ಮ ಸಂಸ್ಕೃತಿಗೆ ಸಲ್ಲಿಸುವ ಗೌರವ. ಅದು ನಮ್ಮ ಭವಿಷ್ಯಕ್ಕೆ ನೀಡುವ ಭದ್ರತೆ. ಏಕೆಂದರೆ ಇಂದು ನಾವು ನೀಡುವ ಗೌರವವೇ ನಾಳೆ ನಮಗೆ ಮರಳಿ ಸಿಗುತ್ತದೆ.

ಲೇಖನ-ಕಾಶಿಗೌ, ಲೇಖಕರು, ಸಾಹಿತಿ ಹಾಗೂ ವಿಶ್ರಾಂತ ಪ್ರಾಂಶುಪಾಲರು ಮೈಸೂರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾರ್ತಾ ಇಲಾಖೆಯ ನೂತನ ಆಯುಕ್ತ ಎಂ.ಎನ್. ಅನುಚೇತ್ ಅವರಿಗೆ ಕೆಯುಡಬ್ಲ್ಯೂಜೆ ಶುಭ ಹಾರೈಕೆಶಿಕ್ಷಣ ಹೆಚ್ಚಿದರೂ ಸಂಸ್ಕಾರ ಕಡಿಮೆಯಾದರೆ ಜ್ಞಾನ ನಿಷ್ಫಲ:ಜ್ಞಾನದ ಅರಿವು ಇಂದಿನ ಸಮಾಜಕ್ಕೆ ಅನಿವಾರ್ಯ: ಸಾಹಿತಿ ಮಣ್ಣೆ ಮೋಹನ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಸ್ನಾತಕ ಸಾರ್ಥಕತೆ ಸಮಾರಂಭಟ್ವಿಟರ್‌ನಲ್ಲಿ ಉಪದೇಶ ನಿಲ್ಲಿಸಿ ಸರ್ಕಾರದ ‘ರಿಯಾಲಿಟಿ ಚೆಕ್’ ಮಾಡಿಕೊಳ್ಳಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜೆಡಿಎಸ್ ಕಿಡಿಕುಮಾರಸ್ವಾಮಿ ವಿರುದ್ಧ ನಿಂದಿಸಿದವರಿಗೆ ಮಂತ್ರಿಸ್ಥಾನ: ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಆಕ್ರೋಶಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದಿಸಿದ ಪಿ.ಜಿ.ಆರ್. ಸಿಂಧ್ಯಾರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ಕರ್ನಾಟಕದ ಹೆಗಲಿಗೆ ದೇಶದ ನೀತಿ-ನಿರೂಪಣೆಯ ಜವಾಬ್ದಾರಿ;ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಕುರಿತು ಚರ್ಚೆ:ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಶಿವಕುಮಾರ್ ಮಹತ್ವದ ಸಭೆ