ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ತಹಶೀಲ್ದಾರ್ಮಲ್ಲಪ್ಪ ಯರಗೋಳ, ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕನ್ನಡ ನಾಡಿನ ಚರಿತ್ರೆಯಲ್ಲಿ ಕಿತ್ತೂರು ಚೆನ್ನಮ್ಮನ ಪರಾಕ್ರಮ ಅಮರವಾದದ್ದು. ಬೆಳಗಾವಿಯ ಕಾಕತಿಯಲ್ಲಿ ಜನಿಸಿದ ಚೆನ್ನಮ್ಮ ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಬ್ರಿಟೀಷರೊಂದಿಗೆ ಹೋರಾಟ ನಡೆಸಿದ ಖ್ಯಾತಿ ಪಡೆದಿದ್ದಾರೆ. ಬ್ರಿಟೀಷರು ದತ್ತು ಮಕ್ಕಳಿಗೆ ರಾಜರಾಗುವ ಹಕ್ಕಿಲ್ಲ ಎಂಬ ಕಾಯ್ದೆಯ ಅಡಿಯಲ್ಲಿ ಕಿತ್ತೂರನ್ನು ವಶಪಡಿಸಿಕೊಳ್ಳಲು ಮುಂದಾದಾಗ ಚೆನ್ನಮ್ಮ ತೋರಿದ ಪರಾಕ್ರಮ ಅಮರ. ಚೆನ್ನಮ್ಮನ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.
ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ ಭಾರತದಲ್ಲಿ ಬ್ರಿಟೀಷರ ವಿರುದ್ದ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡ ನಾಡಿನ ವೀರವನಿತೆ ಕಿತ್ತೂರು ಚೆನ್ನಮ್ಮನ ಕೊಡುಗೆ ಅಪಾರವಾದದ್ದು. ತನ್ನ ಸಂಸ್ಥಾನದ ಉಳಿವಿಗಾಗಿ ಜೀವದ ಹಂಗು ತೊರೆದು ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಲು ಕಂಕಣ ತೊಟ್ಟ ಧೀರ ಮಹಿಳೆ ಎಂದಿಗೂ ಆದರ್ಶಪ್ರಾಯ. ಸಂಗೊಳ್ಳಿರಾಯಣ್ಣನಂತಹ ಸ್ವಾತಂತ್ರ್ಯ ಯೋಧನ ಮಾರ್ಗದರ್ಶಿಯಾಗಿದ್ದ ಚೆನ್ನಮ್ಮ ಸ್ವಾತಂತ್ರ್ಯದ ಸ್ಪೂರ್ತಿ, ಪ್ರೇರಣೆ, ಉತ್ಸಾಹ ಮತ್ತು ಒತ್ತಾಸೆಯಾಗಿದ್ದರು ಎಂದು ಸ್ಮರಿಸಿದರು.
ಕಸಾಪ ಮಾಜಿ ಅಧ್ಯಕ್ಷೆ ಪ್ರಮೀಳಾ ಮಹದೇವ್ಮಾತನಾಡಿ ಚೆನ್ನಮ್ಮನ ಅರಮನೆ ಮತ್ತು ಸ್ಮಾರಕ ಸ್ಥಳಗಳನ್ನು ಸರ್ಕಾರ ವ್ಯವಸ್ಥಿತವಾಗಿ ಸಂರಕ್ಷಿಸುವ ಕೆಲಸ ಮಾಡಬೇಕು. ಕಿತ್ತೂರಿನ ಕೋಟೆ, ಬೈಲಹೊಂಗಲದ ಪುಣ್ಯಸ್ಥಳಗಳಿಗೆ ಪ್ರತಿಯೊಬ್ಬ ಕನ್ನಡಿಗನೂ ಭೇಟಿ ನೀಡಿ ಈ ನೆಲದ ಅಮರ ಚರಿತ್ರೆಯನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್ಮಾತನಾಡಿ ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಳಿಗೆ ದೊರೆತ ಪ್ರಚಾರ, ದಕ್ಷಿಣ ಭಾರತದ ಹೋರಾಟಗಳಿಗೆ ಸಿಗದೇ ಇರುವುದು ವಿಷಾದನೀಯ. ಶತಮಾನಗಳಷ್ಟು ಹಿಂದೆಯೇ ಕನ್ನಡ ನಾಡಿನ ಮಹಿಳೆ ಬ್ರಿಟೀಷ್ಸಾಮ್ರಾಜ್ಯಶಾಹಿಯ ವಿರುದ್ದ ನಡೆಸಿದ ಹೋರಾಟ ಸ್ಮರಣೀಯ. ದೇಶಾದ್ಯಂತ ಕಿತ್ತೂರು ಚೆನ್ನಮ್ಮನನ್ನು ಸ್ಮರಿಸುವ ಕೆಲಸ ಆಗಬೇಕು ಎಂದರು.
ಕೊಡಿಗೇಹಳ್ಳಿ ಗ್ರಾಪಂ ಸದಸ್ಯೆ ನಾಗರತ್ನಮ್ಮ, ದೊಡ್ಡತುಮಕೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್, ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ದಲಿತ ಸಂಘಟನೆಗಳ ಮುಖಂಡರಾದ ರಾಜು ಸಣ್ಣಕ್ಕಿ, ಗುರುರಾಜಪ್ಪ, ರಾಜ್ಯ ವಿಜಯ ಕರ್ನಾಟಕ ರಕ್ಷಣಾವೇದಿಕೆ ತಾಲ್ಲೂಕು ಉಪಾಧ್ಯಕ್ಷ ಜೆ. ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.



