i
ರೈತರಿಗೆ ಗುಡ್ ನ್ಯೂಸ್, ಶ್ರೀಗಂಧ ಬೆಳೆದು ಮಾರಾಟ ಮಾಡಲಿದ್ದ ತೊಡಕು ನಿವಾರಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಗಂಧ ಬೆಳೆಯುವಂತ ರೈತರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿ ಶ್ರೀಗಂಧ ನೀತಿ-2022ಕ್ಕೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸರ್ಕಾರದ ಈ ತೀರ್ಮಾನದಿಂದಾಗಿ ಯಾವುದೇ ರೈತರು ಶ್ರೀಗಂಧ ಬೆಳೆದು, ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟ ಮಾಡೋದಕ್ಕೆ ಇದ್ದ ನಿರ್ಬಂಧಗಳು ದೂರವಾಗಿದ್ದು ಯಾವುದೇ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟ ಮಾಡಲು ರೈತರಿಗೆ ಅವಕಾಶ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸಂಪುಟ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ಸಚಿವ ಡಾ.ಕೆ ಸುಧಾಕರ್ ಹಂಚಿಕೊಂಡರು. ಸಚಿವ ಸಂಪುಟ ಸಭೆಯಲ್ಲಿ ಶ್ರೀಗಂಧ ನೀತಿ-2022ಕ್ಕೆ ಅನುಮೋದನೆ ನೀಡಲಾಗಿದೆ . ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟ ಮಾಡಬಹುದಾಗಿದೆ. ಜಾಗತಿಕ ಮಟ್ಟದಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಶ್ರೀಗಂಧ ನೀತಿ ಸರಳೀಕರಣ ಮಾಡಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.