i
ಹಾವೇರಿ, ಉಡುಪಿ ಹಾಗೂ ರಾಯಚೂರಿನಲ್ಲಿ ಜವಳಿ ಪಾರ್ಕ್-ಸಚಿವ ಮುನೇನಕೊಪ್ಪ
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ರಾಜ್ಯದ 6 ಕಡೆ ಜವಳಿ ಪಾರ್ಕ್ ಈಗಾಗಲೇ ನಿರ್ಮಿಸಲಾಗಿದೆ. ಹಾವೇರಿ, ಉಡುಪಿ ಹಾಗೂ ರಾಯಚೂರಿನಲ್ಲೂ ಸಹ ಜವಳಿ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು. ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಕೆ.ಎಸ್.ನವೀನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯ ಸರ್ಕಾರ 2019ರಲ್ಲಿ ನೂತನ ಜವಳಿ ಹಾಗೂ ಸಿದ್ಧಉಡುಪು ನೀತಿಯನ್ನು ಜಾರಿಗೊಳಿಸಿದೆ. ಇದರ ಅನ್ವಯ ಪ್ರತ್ಯೇಕ ಉದ್ಯಮಿ ಅಥವಾ ಎಸ್.ಪಿ.ವಿಗಳು 15 ಎಕರೆ ಜಾಗ ಹೊಂದಿ ಜವಳಿ ಪಾರ್ಕ್ ಸ್ಥಾಪಿಸಲು ಮುಂದಾದರೆ ಸರ್ಕಾರದಿಂದ ಸಹಾಯ ನೀಡಲಾಗುವುದು ಎಂದರು.
ಶಾಸಕ ಕೆ.ಎಸ್. ನವೀನ್ ಮಾತನಾಡಿ ಜಾಗತಿಕವಾಗಿ ಪಾಕಿಸ್ತಾನ ಹಾಗೂ ಚೈನಾ ಬಂಡವಾಳ ಹೂಡಿಕೆದಾರರ ವಿಶ್ವಾಸ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಭಾರತ ಸಿದ್ಧ ಉಡುಪು ತಯಾರಿಕೆ ಕೇಂದ್ರವಾಗಿ ಜಗತ್ತಿಗೆ ಹೊರಹೊಮ್ಮಲಿದೆ. ರಾಜ್ಯ ಸರ್ಕಾರ ಇದಕ್ಕೆ ಸಿದ್ದವಾಗಿದ್ದು, ರಾಜ್ಯದಲ್ಲಿ ಜವಳಿ ಉದ್ಯಮಕ್ಕೆ ಬೆಂಬಲ ನೀಡಬೇಕು. ಬೆಂಗಳೂರಿನಲ್ಲಿ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳು ನೆಲೆಗೊಂಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಗಾರ್ಮೆಂಟ್ಸ್ ಉದ್ಯೋಗ ಅರಿಸಿ ಲಕ್ಷಾಂತರ ಜನ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಪ್ರತಿ ತಾಲೂಕು ಹಂತಲ್ಲಿಯೂ ಗಾರ್ಮೆಂಟ್ಸ್ ತೆರೆಯಲು ನೆರವು ನೀಡಬೇಕು. ಜವಳಿ ಪಾರ್ಕ್ ಸ್ಥಾಪನೆಯ ಉದ್ದೇಶದಿಂದ ಸರ್ಕಾರ ನೆರವು ಪಡೆದುಕೊಂಡು ಖಾಸಗಿ ವ್ಯಕ್ತಿಗಳು ಉದ್ದಿಮೆ ಸ್ಥಾಪಿಸಲದೆ. ರಿಯಲ್ ಎಸ್ಟೇಟ್ ಮಾದರಿಯಲ್ಲಿ ಕಾರ್ಯವರ್ನಿಹಿಸುತ್ತಿದಾರೆ. ಇವರಿಗೆ ಕಡಿವಾಣ ಹಾಕಬೇಕು ಎಂದು ಸಚಿವರಲ್ಲಿ ಕೋರಿಕೊಂಡರು.
ಜವಳಿ ಪಾರ್ಕ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಹಾಗೂ ಉದ್ಯೋಗ ನೀಡದಿರುವ ಉದ್ದಿಮೆದಾರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೋಪ್ಪ ಭರವಸೆ ನೀಡಿದರು.