i
BPL ಕುಟುಂಬದವರ ಮನೆ ನಿರ್ಮಾಣಕ್ಕೆ ಎರಡು ಪಟ್ಟು ಸಬ್ಸಿಡಿ ಹೆಚ್ಚಳ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಸತಿ ರಹಿತ ಬಿಪಿಎಲ್ ಕುಟುಂಬದವರ ವಿವಿಧ ವಸತಿ ಯೋಜನೆಗಳ ಅಡಿ ಮನೆ ನಿರ್ಮಿಸಿಕೊಳ್ಳಲು ಸಬ್ಸಿಡಿ ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆದಿದೆ.
ಗ್ರಾಮೀಣ ಪ್ರದೇಶದ ಪರಿಶಿಷ್ಟರು, ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲರಿಗೂ 3 ಲಕ್ಷ ರೂ ಮತ್ತು ನಗರ ಪ್ರದೇಶದಲ್ಲಿ 4 ಲಕ್ಷ ರೂ ಸಹಾಯಧನ ನೀಡಲು ಚಿಂತನೆ ನಡೆದಿದೆ.
ಪ್ರಸ್ತುತ ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂ. ಹಾಗೂ ನಗರ ಪ್ರದೇಶದಲ್ಲಿ 2.70 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂ ನಿಂದ 3 ಲಕ್ಷ ರೂ. ನಗರ ಪ್ರದೇಶದಲ್ಲಿ 2.70 ಲಕ್ಷ ರೂ. ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗುವುದು. ಕನಿಷ್ಠ ಮಾದರಿಯ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ರೂ. ಅಗತ್ಯವಿದೆ. ಸರ್ಕಾರದ ಸಬ್ಸಿಡಿ ಸಾಕಾಗುತ್ತಿಲ್ಲ. ಹೀಗಾಗಿ ವಸತಿ ಯೋಜನೆಗಳ ಸಬ್ಸಿಡಿ ಮೊತ್ತ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬದವರಿಗೆ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಕೇಂದ್ರ ಸರ್ಕಾರ 72,000 ರೂ., ರಾಜ್ಯ ಸರ್ಕಾರ 48,000 ರೂ. ಸೇರಿ 1.20 ಲಕ್ಷ ರೂ. ಸಹಾಯಧನ ನೀಡುತ್ತಿದೆ. ಈ ಮೊತ್ತವನ್ನು ಎಲ್ಲಾ ವರ್ಗದ ಫಲಾನುಭವಿಗಳಿಗೆ ಸಮಾನಾಗಿ 3 ಲಕ್ಷ ರೂಪಾಯಿಗೆ ಏರಿಕೆ ಮಾಡಲು ಮುಂದಾಗಿದ್ದು ಸರ್ಕಾರವೇ ಹೆಚ್ಚುವರಿ ಮೊತ್ತ ಭರಿಸಲಿದೆ ಎಂದು ಹೇಳಲಾಗಿದೆ.