i
ಮಡಿವಾಳರಿಗೆ ಪರಿಶಿಷ್ಟ ಜಾತಿಗೆ ಸೇರ್ಪಡೆ ಪರಿಶೀಲನೆ-ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುಲಶಾಸ್ತ್ರ ಅಧ್ಯಯನ ವರದಿ ಪರಿಶೀಲನೆ ಮಾಡಿದ ನಂತರ ಮಡಿವಾಳರಿಗೆ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವ ಬೇಡಿಕೆಯನ್ನು ಕಾನೂನು ಚೌಕಟ್ಟಿನೊಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಮಡಿವಾಳ ಮಾಚಿದೇವ ಗುರುಪೀಠ ಆಯೋಜಿಸಿದ್ದ ಕಾಯಕ ದಿನ ಕುರಿತು ಸಮುದಾಯ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಏನೇ ಮಾಡಿದರೂ ಸಂವಿಧಾನದ ಚೌಕಟ್ಟಿನೊಳಗೆ ಎಲ್ಲವನ್ನೂ ನಿರ್ವಹಿಸಬೇಕು. ಇತರ ಸಮಾಜದವರಿಗೆ ಅನ್ಯಾಯ ಆಗದ ರೀತಿ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಮುದಾಯಕ್ಕೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವ ಕುರಿತು ಪ್ರೊ.ಅನ್ನಪೂರ್ಣ ಅವರು ನಡೆಸಿರುವ ಮಡಿವಾಳ ಸಮುದಾಯ ಕುರಿತ ಅಧ್ಯಯನ ವರದಿಯ ಬಗ್ಗೆ ಕಾಂಗ್ರೆಸ್ ಮೌನವನ್ನು ಪ್ರಶ್ನಿಸಿದ ಎಂಟು ವರ್ಷಗಳ ಹಿಂದೆ ವರದಿ ಬಂದರೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿತ್ತು ಎಂದರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮುದಾಯದ ಅಧ್ಯಯನಕ್ಕಾಗಿ ಪ್ರೊ.ಅನ್ನಪೂರ್ಣ ಅವರನ್ನು ನೇಮಿಸಿದ್ದರು. ಶಂಕರಪ್ಪ ಅವರನ್ನು ಎಂಎಲ್ಸಿ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಮಡಿವಾಳ ಸಮುದಾಯದ ಮುಖಂಡ ರಘು ಕೌಟಿಲ್ಯ ಅವರು ಎರಡು ಬಾರಿ ಸೋಲುಕಂಡಿದ್ದರೂ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ನ ಅಧ್ಯಕ್ಷರನ್ನಾಗಿ ಮಾಡಲಾಯಿತು. ರಾಜು ತಲ್ಲೂರು ಅವರನ್ನು ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಬಸವ ಮಾಚಿದೇವ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.