i
ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಿಯಕರನೊಂದಿಗೆ ಸಂಚು ಮಾಡಿ ಪತಿಯನ್ನೇ ಕೊತೆಗೈದಿರುವ ಪತ್ನಿ ಈಗ ಪ್ರಯಕರನೊಂದಿಗೆ ಜೈಲು ಕಂಬಿ ಎಣಿಸುತ್ತಿದ್ದಾಳೆ.
ವಿವಾಹಿತ ಮಹಿಳೆಯೊಬ್ಬಳು ಪ್ರೀತಿಯ ಮೋಹಕ್ಕೆ ಸಿಲುಕಿ ಪತಿಯನ್ನೇ ಕೊಲೆಗೈದಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ನಂತರ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದ ಮಹಿಳೆ, ಅಂತ್ಯಕ್ರಿಯೆಯನ್ನು ಎಲ್ಲರೊಂದಿಗೆ ಸೇರಿ ನಡೆಸಿದ್ದಾಳೆ. ಆ ಬಳಿಕ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಸುಖ ಜೀವನ ನಡೆಸಲು ಮನೆಯಿಂದ ಓಡಿಹೋಗಿದ್ದು, ಕೊಲೆ ನಡೆದ ಆರು ತಿಂಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜಯ್ ಗಾಂಧಿ ನಗರದ ಸ್ಲಂ ನಲ್ಲಿ 35 ವರ್ಷದ ಆಂಜನೇಯ ಏಕಾಏಕಿ ಮನೆಯಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಆತನ ಪತ್ನಿ ಅನಿತಾ(31) ತನ್ನ ಪತಿಗೆ ಹೃದಯಾಘಾತವಾಗಿದ್ದು, ಮನೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು. ಇದನ್ನೇ ನಿಜ ಎಂದು ನಂಬಿದ್ದ ಕುಟುಂಸ್ಥರು ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಕಳೆದ ಆರು ತಿಂಗಳ ಹಿಂದೆ ನಡೆಸಿದ್ದರು.
ಆರೋಪಿ ಅನಿತಾ, ರಾಕೇಶ್ ಎಂಬತನೊಂದಿಗೆ ಮದುವೆಯ ಬಳಿಕ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಆಂಜನೇಯ ಇವರ ಅಕ್ರಮ ಸಂಬಂಧಕ್ಕೆ ಅಡ್ಡಿ ಬರ್ತಾನೆ ಎಂದು ಇಬ್ಬರು ಸೇರಿ ಸಂಚು ಮಾಡಿ ರಾತ್ರಿ ಮನೆಗೆ ಕುಡಿದು ಬಂದಿದ್ದ ಪತಿಯ ಮುಖದ ಮೇಲೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆತ ಹಾಸಿಗೆ ಮೇಲೆಯೇ ಸಾವನ್ನಪ್ಪಿದ್ದ ಎಂದು ಆರೋಪಿ ಅನಿತಾ ನಾಟಕ ಮಾಡಿದ್ದಳು. ಇತ್ತೀಚೆಗೆ ಮಕ್ಕಳನ್ನು ಅವಳ ಅಜ್ಜಿಯ ಬಳಿ ಬಿಟ್ಟಿದ್ದ ಅನಿತಾ, ಪ್ರಿಯಕರನೊಂದಿಗೆ ಜೀವನ ನಡೆಸಲು ಹೋಗಿದ್ದಳು. ಈ ವೇಳೆ ಮಕ್ಕಳು ತಮ್ಮ ತಂದೆಯ ಸಾವಿನ ರಹಸ್ಯವನ್ನು ಅಜ್ಜಿಯ ಎದುರು ಬಿಚ್ಚಿಟ್ಟಿದ್ದು, ತಂದೆಯನ್ನು ಹೇಗೆ ಕೊಲೆ ಮಾಡಿದರು ಎಂದು ತಿಳಿಸಿ ಕೊಲೆಯ ರಹಸ್ಯ ಬಯಲು ಮಾಡಿದ್ದಾರೆ. ಮೃತ ಆಂಜನೇಯ ಅವರ ತಾಯಿ ಸೊಸೆ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಆರೋಪಿಗಳಾದ ಅನಿತಾ ಹಾಗೂ ರಾಕೇಶ್ನನ್ನು ಹುಡುಕಿ ಜೈಲಿಗಟ್ಟಿದ್ದಾರೆ.