
ಐದೇ ತಿಂಗಳಿಗೆ ಅಕ್ಕ(ಪೂರ್ಣಿಮಾ)ನ ರಸ್ತೆ ಪುಡಿಪುಡಿ!?…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳು ಕಳಪೆಯಾಗಿವೆಯಾ?, ರಸ್ತೆ ನಿರ್ಮಿಸಿದ ಬೆನ್ನಲ್ಲೇ ರಸ್ತೆ ಕಿತ್ತು ಹೋಗುತ್ತಿರುವುದೇಕೆ, ರಸ್ತೆಗಳ ನಿರ್ಮಾಣ ಕಳಪೆಯಾಗಲು ಕಾರಣ ಅಕ್ಕನ ಹಿಂಭಾಲಕರೋ ಅಥವಾ ಆಯಾಯ ಇಲಾಖೆ ಅಧಿಕಾರಿಗಳೋ ಅಥವಾ ಲಂಚಾವತಾರವೋ ಗೊತ್ತಿಲ್ಲ.
ಆದರೆ ಸಾರ್ವಜನಿಕರು ಮಾತ್ರ ನೂತನವಾಗಿ ನಿರ್ಮಾಣ ಮಾಡಿರುವ ರಸ್ತೆಗಳಲ್ಲಿ ಕೈಯಿಂದಲೇ ಡಾಂಬರ್ ಕೀಳುವ ವಿಡಿಯೋಗಳ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಅದೇ ರೀತಿ ಕ್ಷೇತ್ರದ ಮತದಾರರು ಸೇರಿದಂತೆ ಮತ್ತಿತರರು ಭಿನ್ನ ಭಿನ್ನವಾಗಿ ಅರ್ಥೈಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವ ವಿಡಿಯೋ ತಾಜಾ ಉದಾಹರಣೆ ಆಗಿದೆ. ಇದರ ಅಸಲಿ ತನ ಪರೀಕ್ಷೆ ಮಾಡಲಾಗಿದ್ದು ಈ ವಿಡಿಯೋ ಅಪ್ ಲೋಡ್ ಮಾಡಿರುವ ಫೇಸ್ ಬುಕ್ ಖಾತೆದಾರರು ಇದು ಹಿರಿಯೂರು ತಾಲೂಕಿನ ಧರ್ಮಪುರದಿಂದ ಬೆನಕನಹಳ್ಳಿಗೆ ಹೋಗುವ ರಸ್ತೆ ಡಾಂಬರೀಕರಣ ಮಾಡಿ ಕೇವಲ ಐದು ತಿಂಗಳಾಗಿದೆ ಅಕ್ಕನ ರಸ್ತೆ ಪುಡಿಪುಡಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಕಡೆ ಇದು ಖಂಡೇನಹಳ್ಳಿಯಿಂದ ಆಂಜನೇಯ ಸ್ವಾಮಿ ದೇವಸ್ಥಾನದ ಕಾವಲ್ ರಸ್ತೆ ಎನ್ನುತ್ತಿದ್ದಾರೆ. ಆದರೆ ಒಂದಂಥೂ ನಿಜ, ಈ ರಸ್ತೆಗಳು ಹಿರಿಯೂರು ವಿಧಾನಸಭಾ ಕ್ಷೇತ್ರದೊಳಗೆ ಬರುತ್ತವೆ.
ಸಾರ್ವಜನಿಕರು ಹರಿ ಬಿಟ್ಟಿರುವ ಈ ವಿಡಿಯೋ ಕುರಿತು ಲೋಕೋಪಯೋಗಿ, ಜಿಪಂ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ರಸ್ತೆಯನ್ನ ನಾವು ಮಾಡಿಲ್ಲ, ಯಾರು ಮಾಡಿದ್ದಾರೋ ಗೊತ್ತಿಲ್ಲ ಎನ್ನುವ ಮಾಹಿತಿ ನೀಡಿದರು. ಅದೇ ರೀತಿ ಜಿಪಂ ಇಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಅಭಿಯಂತರ ಅಧಿಕಾರಿ ಹನುಮಂತಪ್ಪನವರಿಗೆ ಸಂಪರ್ಕಿಸಿದಾಗ ಈ ರಸ್ತೆಯನ್ನ ನಾವು ಮಾಡಿಲ್ಲ ಎನ್ನುವ ಉತ್ತರ ಬಂದಿದೆ.
ಕೊನೆಗೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್(9886468169) ಅವರ ಮೊಬೈಲ್ ಸಂಖ್ಯೆಗೂ ಕರೆ ಮಾಡಲಾಯಿತು. ಅವರು ಪೋನ್ ರಿಸೀವ್ ಮಾಡಲಿಲ್ಲ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಧರ್ಮಪುರ ಕೆರೆಗೆ ನೀರುಣಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಲು ಬಂದ ಸಂದರ್ಭದಲ್ಲಿ ಮಾಡಲಾದ ರಸ್ತೆ ಕೂಡಾ ಒಂದು ವಾರದಲ್ಲೇ ಕಿತ್ತು ಹೋಗಿತ್ತು. ಇನ್ನೂ ಅನೇಕ ರಸ್ತೆಗಳ ಸ್ಥಿತಿಯು ಇದೆ ರೀತಿಯಾಗಿದೆ.
ಎಲ್ಲವೂ ವ್ಯವಸ್ಥೆ ಅಯೋಮಯವಾಗಿದೆ. ಇಂದು ಶಾಸಕರೇ ಅನುದಾನ ತರಲು ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳು, ಆರ್ಥಿಕ ಇಲಾಖೆ ಸೇರಿದಂತೆ ಮತ್ತಿತರ ಕಡೆಗಳಿಗೆ ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಇರುವ ಹಣದಲ್ಲೇ ಒಂದಿಷ್ಟು ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಏಕೆಂದರೆ ಮತ್ತೇ ಆ ರಸ್ತೆಗೆ ಐದು ವರ್ಷಗಳ ತನಕ ಅನುದಾನ ಹಾಕಲು ಬರುವುದಿಲ್ಲ. ಇದನ್ನ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಗಮನಿಸಬೇಕಾಗದ ಅಗತ್ಯ ಇದೆ. ಅಲ್ಲದೆ ಅಭಿವೃದ್ಧಿ ಕಾರ್ಯಗಳು ಕಳಪೆ ಆಗದಂತೆ ನೋಡುವ ಹೊಣೆಗಾರಿಕೆ ಶಾಸಕರ ಮೇಲಿದೆ. ಹೇಳಿ ಕೇಳಿ ಇದು ಚುನಾವಣೆ ಸಂದರ್ಭ, ವಿರೋಧಿಗಳ ಬಾಯಿಗೆ ಆಡಳಿತ ರೂಢರು ತುತ್ತಾಗಬಾರದು. ಒಂದು ವೇಳೆ ತುತ್ತಾದರೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.