
ಎಕರೆ 10 ಸಾವಿರ, ವೃದ್ಧರಿಗೆ 5 ಸಾವಿರ, ವಿಧವೆಯರಿಗೆ 2500 ರೂ.ನೀಡಲು ಘೋಷಣೆ…
ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಎಕರೆ ಜಮೀನಿಗೆ ಪ್ರತಿ ವರ್ಷ 10,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಕುಷ್ಟಗಿ ಕ್ಷೇತ್ರದ ತಾವರಾಗೇರಾದಲ್ಲಿ ಮಾತನಾಡಿದ ಅವರು, ವೃದ್ಧಾಪ್ಯ ವೇತನ 5 ಸಾವಿರ ರೂ.ಗೆ, ವಿಧವಾ ವೇತನವನ್ನು 2,500 ರೂಪಾಯಿಗೆ ಹೆಚ್ಚಳ ಮಾಡಲಾಗುತ್ತದೆ, ಅಲ್ಲದೆ ಯುವಕರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಹಿಳೆಯರ ಸ್ವಸಹಾಯ ಸಂಘಗಳ ಮತ್ತು ರೈತರ ಸಾಲ ಮನ್ನಾ ಮಾಡಿ ಅವರನ್ನು ಸಾಲಮುಕ್ತಗೊಳಿಸಲಾಗುವುದು. ಇದೊಂದು ಬಾರಿ ನನಗೆ ಸಂಪೂರ್ಣ ಅಧಿಕಾರ ನೀಡಿ. ನಾನು ನೀಡುವ ಭರವಸೆ ಈಡೇರಿಸಲು 2.5 ಲಕ್ಷ ಕೋಟಿ ರೂ. ಬೇಕಿದೆ ಎಂದು ತಿಳಿಸಿದರು.