i
7ನೇ ವೇತನ ಆಯೋಗದ ವರದಿ ಶೀಘ್ರ ಜಾರಿ-ಮುಖ್ಯಮಂತ್ರಿ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ರಾಜ್ಯ ಸರ್ಕಾರಿ ನೌಕರರು ಮಾರ್ಚ್-1 ರಿಂದ ಅನಿರ್ದಿಷ್ಟಾವಧಿಗೆ ಧರಣಿ ಮಾಡಲು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ 7ನೇ ವೇತನ ಆಯೋಗದ ವರದಿ ಜಾರಿಗೆ ತಂದು ವೇತನ ಹೆಚ್ಚಳ ಮಾಡಲು ತೀರ್ಮಾನಿಸಿದ್ದಾರೆ.
ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿ ಅವರು ಕೂಡಲೇ 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಅಗತ್ಯವಿರುವ ಹಣ ನೀಡಲಾಗುವುದು ಎಂದು ಗುಲ್ಬರ್ಗ ವಿವಿಯಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಕಲ್ಯಾಣ ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಸರ್ಕಾರಿ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ ನಡೆಸಬಾರದು. ರಾಜ್ಯದ ಜನರ ಹಿತ ದೃಷ್ಟಿಯಿಂದ ಸರ್ಕಾರದೊಂದಿಗೆ ಸಹಕರಿಸಬೇಕು. ನಾನು ನೀಡಿದ ಮಾತಿನಂತೆ 7ನೇ ವೇತನ ಆಯೋಗ ರಚಿಸಿದ್ದು, ನೌಕರರ ಸಂಘದ ಬೇಡಿಕೆ ಈಡೇರಿಸಿದ್ದೇನೆ. ವೇತನ ಆಯೋಗದ ಅಧ್ಯಕ್ಷರು ಮಧ್ಯಂತರ ವರದಿ ನೀಡಿದರೆ ಹಣ ಮೀಸಲಿಡಲು ಸಿದ್ಧವಿದ್ದೇವೆ. ಮೊದಲು ವರದಿ ಬರಲಿ, ನೌಕರರ ಸಂಘದವರು ಸ್ವಲ್ಪ ತಾಳ್ಮೆ ವಹಿಸಬೇಕು, ಹೋರಾಟ ಮಾಡಬಾರದು ಎಂದು ಸಿಎಂ ಮನವಿ ಮಾಡಿದ್ದಾರೆ.