
ಹಿಂದುಳಿದ ಸಣ್ಣ ಸಮುದಾಯದ ರಘು ಆಚಾರ್ ವಿರುದ್ದ ಷಡ್ಯಂತ್ರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಳ್ಳು ಆರೋಪ ಮಾಡಿ ಸಜ್ಜನ ರಾಜಕಾರಣಿ ಜಿ.ರಘು ಆಚಾರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಜಿ.ರಘು ಆಚಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಡಿ.ಎಸ್ ಹಳ್ಳಿ ಶಿವು ಹೇಳಿದರು.
ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಜಿ.ರಘು ಆಚಾರ್ ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿದ್ದು, ನಿರಂತರವಾಗಿ ಕ್ಷೇತ್ರದ ಜನರ ಜೊತೆ ಸಂಪರ್ಕ ಹೊಂದಿದ್ದಾರೆ, ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ರೈತರ ಕಷ್ಟಗಳಿಗೆ ಸ್ಪಂಧಿಸಿದ್ದಾರೆ, ಎಲ್ಲಾ ವರ್ಗದ ಸಮುದಾಯದ ಜನರಿಗೆ ಸಹಾಯ ಮಾಡಿದ್ದಾರೆ, ಶಾಲಾ ಮಕ್ಕಳಿಗೆ ನೆರವಾಗಿದ್ದಾರೆ. ಆದರೆ ಸಣ್ಣ ಸಮುದಾಯವನ್ನು ಪ್ರತಿನಿಧಿಸುವ ಹಿಂದುಳಿದ ವರ್ಗದ ಜಿ.ರಘು ಆಚಾರ್ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ಅವರ ವಿರುದ್ದ ಕೆಲವು ಬೆರಳೆಣಿಕೆಯಷ್ಟು ಪಟ್ಟಭದ್ರ ಹಿತಾಸಕ್ತಿಗಳು ಜಾತಿಯ ಬಣ್ಣ ಹಚ್ಚಿ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿರುವುದು, ಮತ್ತು ತೇಜೋವಧೆ ಮಾಡುತ್ತಿರುವುದು ಖಂಡನೀಯ. ರಾಜಕೀಯ ಮಾಡುವುದಾದರೆ ನೇರವಾಗಿ ಮಾಡಬೇಕು, ಅದನ್ನು ಬಿಟ್ಟು ಜಾತಿ ಜಾತಿಗಳ ನಡುವೆ ತಂದಿಟ್ಟು ತಮಾಷೆ ನೋಡುವುದನ್ನು ಕೆಲವರು ಬಿಡಬೇಕು. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲೇ ಇರುವ ನಿಷ್ಟಾವಂತ, ಜಾತ್ಯಾತೀತ ವ್ಯಕ್ತಿ ರಘು ಆಚಾರ್ ಅವರಿಗೆ ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದಲೇ ಅವಕಾಶ ನೀಡಬೇಕು ಎಂದು ನಾವು ಅವರ ಅಭಿಮಾನಿಗಳು, ಅಹಿಂದ ವರ್ಗದ ಮುಖಂಡರುಗಳು, ರೈತಮುಖಂಡರುಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಸಿರು ಸೇನೆ ತಾಲೂಕು ಕಾರ್ಯದರ್ಶಿ ಮಾರುತಿ, ಫಾದರ್ ವೆಂಕಟೇಶ್, ಕಾಂಗ್ರೆಸ್ ತಾಲೂಕು ಗ್ರಾಮೀಣ ಘಟಕದ ಉಪಾಧ್ಯಕ್ಷ ಬೊಮ್ಮಣ್ಣ, ಚಿಕ್ಕಣ್ಣ ಯಾದವ್ ಹಾಜರಿದ್ದರು.