
ಬರ್ತಿದೆ ವಿಭಿನ್ನ ಕಥಾಹಂದರದ ಹೊಸ ಧಾರಾವಾಹಿ “ರಾಣಿ” ಏಪ್ರಿಲ್ 3 ರಿಂದ ಸಂಜೆ 6.30ಕ್ಕೆ …
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಿರುತೆರೆಯಲ್ಲಿ ಸತತ 15 ವರ್ಷಗಳಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಹೊಸದೊಂದು ಕಥೆ ಶುರುವಾಗುತ್ತಿದೆ ಅದೇ ‘ರಾಣಿ‘.
ಹಳ್ಳಿಯಲ್ಲಿ ಬೆಳೆದಿರುವ ಹುಡುಗಿ ರಾಣಿ. ತನ್ನೊಂದಿಗಿರೋ ಕುರಿ ಮರಿ ‘ಚೆರ್ರಿ‘ ಅಂದ್ರೆ ಆಕೆಗೆ ಪಂಚಪ್ರಾಣ. ತಂದೆಯ ಪೋಷಣೆಯಲ್ಲಿ ಬೆಳೆದಿರುವ ಈಕೆ ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ತನ್ನ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡಿರುತ್ತಾಳೆ. ಈಕೆಯ ಮಾತು ಸಿಡಿಲಿನಂತಾಗಿದ್ರು ಕೂಡ ಮನಸು ಮಾತ್ರ ತಾಯಿಯ ಮಡಿಲಿನಂತೆ, ಇಂತಹ ಮುದ್ದು ಮೊಗದ ಚೆಲುವೆಗೆ ದೇವರು ನೀಡಿದ ಶಾಪ ಏನಂದ್ರೆ ಯಾರೇ ಏನೇ ಮಾತನಾಡಿದ್ರು ರಾಣಿಗೆ ಕೇಳಿಸಲ್ಲ ಯಾಕಂದ್ರೆ ಈಕೆ ಶ್ರವಣದೋಷವನ್ನು(ಕಿವುಡುತನ) ಹೊಂದಿರುತ್ತಾಳೆ. ತಾಯಿ ಹಾಗು ಅಣ್ಣನ ಜೊತೆ ರಾಣಿ ತನ್ನ ಕಿವಿಯನ್ನು ಕೂಡ ಕಳೆದುಕೊಂಡಿರುತ್ತಾಳೆ. ಈ ಘಟನೆಗೆ ಕಾರಣವಾದವರನ್ನು ಸುಮ್ನೆ ಬಿಡಲ್ಲ ಎಂದು ಪಣ ತೊಟ್ಟಿರುತ್ತಾಳೆ ರಾಣಿ.
ಇನ್ನು ಈ ಕತೆಯ ನಾಯಕ ಅರ್ಜುನ್. ಈತನಿಗೆ ತಾಯಿ ಅಂದ್ರೆ ಜೀವ, ಅಮ್ಮನ ಮಾತು ಅಂದ್ರೆ ವೇದವಾಕ್ಯ ವಿದ್ಯಾಭ್ಯಾಸವನ್ನು ವಿದೇಶದಲ್ಲಿ ಮುಗಿಸಿಕೊಂಡು ಬಂದಿದ್ರು ಕೂಡ ಈತನಿಗೆ ಹಳ್ಳಿಯಲ್ಲಿರುವ ರಗಡ್ ಹುಡುಗಿ ರಾಣಿಯ ಮೇಲೆ ಪ್ರೇಮಾಂಕುರವಾಗುತ್ತೆ, ಆದರೆ ಅರ್ಜುನ್ ತಾಯಿ ಸೌದಾಮಿನಿಗೆ ರಾಣಿಯ ಮೇಲೆ ದ್ವೇಷವಿರುತ್ತೆ ಇಂತಹ ಪರಿಸ್ಥಿತಿಯಲ್ಲಿ ಅರ್ಜುನ್ ತನ್ನ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ, ಅಂದು ನಡೆದ ಘಟನೆಗೆ ಯಾರು ಕಾರಣ ಎಂಬುದನ್ನು ರಾಣಿ ಹೇಗೆ ಕಂಡುಕೊಳ್ಳುತ್ತಾಳೆ, ರಾಣಿ ಶ್ರವಣ ದೋಷ (ಕಿವುಡುತನ) ಹೊಂದಿರುವವವಳು ಎಂಬ ಸತ್ಯ ಅರ್ಜುನ್ ಗೆ ಗೊತ್ತಾದ್ರೆ ಮುಂದೇನಾಗುತ್ತೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಸ್ಟಾರ್ ಸುವರ್ಣ‘ ವಾಹಿನಿಯು ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದು, ‘ರಾಣಿ‘ ಧಾರಾವಾಹಿಯು ಸನ್ನೆ ಭಾಷೆಯಲ್ಲಿಯೂ ಮೂಡಿಬರಲಿದೆ. ಹೀಗಾಗಿ ಶ್ರವಣ ದೋಷ ಹೊಂದಿರುವವರು ಕೂಡ ‘ರಾಣಿ‘ ಧಾರಾವಾಹಿಯನ್ನು ನೋಡಬಹುದು.
‘ರಾಣಿ‘ ಧಾರಾವಾಹಿಯು ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ಪ್ರವೀಣ್ ಅಥರ್ವ, ನಾಯಕಿಯಾಗಿ ಚಂದನ ಎಮ್ ರಾವ್ ಹಾಗು ಸೌದಾಮಿನಿ ಪಾತ್ರದಲ್ಲಿ ಸ್ವಾತಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ/ನಿರ್ಮಾಪಕರಾದ ರಾಮ್ ಜೀ ಅವರ ಸಾರಥ್ಯದಲ್ಲಿ ಈ ಧಾರಾವಾಹಿಯನ್ನು ಬಾನಿಜೆ ಏಷಿಯಾ ಸಂಸ್ಥೆ ನಿರ್ಮಿಸುತ್ತಿದ್ದು, ಸಹನಿರ್ಮಾಣದ ಜವಾಬ್ದಾರಿಯನ್ನು ಗಗನ ಎಂಟರ್ ಪ್ರೈಸಸ್ ಸಂಸ್ಥೆ ಹೊತ್ತುಕೊಂಡಿದೆ.