i
ದೆಹಲಿಯಲ್ಲಿ ನಿರಂತರ ಸಭೆ, ನೂತನ ಮುಖ್ಯಮಂತ್ರಿ ಹೆಸರು ಇಂದೇ ತೀರ್ಮಾನ ಸಾಧ್ಯತೆ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ಮುಖ್ಯಮಂತ್ರಿ ಹುದ್ದೆ ಕಗ್ಗಂಟು ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಎಡಬಿಡದೆ ಸರಣಿ ಸಭೆಗಳನ್ನು ಮಾಡುತ್ತಿರುವುದು ಒಂದು ಕಡೆಯಾದರೆ ನಾನು ಶ್ರಮ ಹಾಕಿ ಪಕ್ಷ ಕಟ್ಟಿ 135 ಸೀಟು ಗೆಲ್ಲಿಸಿಕೊಂಡು ಬಂದಿದ್ದು ನನಗೆ ಕೂಲಿ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆರೋಗ್ಯದ ನೆಪವೊಡ್ಡಿ ಸೋಮವಾರ ದೆಹಲಿಗೆ ಹೋಗದೆ ಮಂಗಳವಾರ ದೆಹಲಿ ತಲುಪಿದ ನಂತರ ಸಹೋದರ ಡಿಕೆ ಸುರೇಶ್ ನಿವಾಸದಲ್ಲಿ ಆಪ್ತರು, ಶಾಸಕರು ಮತ್ತು ಹಿತೈಷಿಗಳ ಸಭೆ ನಡೆಸಿ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಕರ್ನಾಟಕ ಕಾಂಗ್ರೆಸ್ 135 ಶಾಸಕರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದ್ದು ಕಾಂಗ್ರೆಸ್ನ ಕೇಂದ್ರ ವೀಕ್ಷಕರು ತಮ್ಮ ವರದಿಯನ್ನು ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಶಾಸಕರು ನೀಡಿರುವ ಗೌಪ್ಯ ವರದಿಯನ್ನು ಓಪನ್ ಮಾಡಲಿದ್ದಾರೆ. ಇದರ ಮಧ್ಯ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು 6.5 ಕೋಟಿ ಕನ್ನಡಿಗರಿಗೆ ಮಾಡಿದ ಪ್ರತಿಜ್ಞೆಗೆ ಪಕ್ಷವು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇದರ ಮಧ್ಯ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡುತ್ತಿದ್ದು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ಯಾವುದಾದರೂ ಚಾನೆಲ್ ನಾನು ಕೆಪಿಸಿಸಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವರದಿ ಮಾಡುತ್ತಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಗುಡುಗಿದರು.
ಕೆಲವರು ನಾನು ರಾಜೀನಾಮೆ ನೀಡುತ್ತೇನೆ ಎಂದು ವರದಿ ಮಾಡುತ್ತಿದ್ದಾರೆ. ನನ್ನ ತಾಯಿ ನನ್ನ ಪಕ್ಷ, ನಾನು ಈ ಪಕ್ಷವನ್ನು ಕಟ್ಟಿದ್ದೇನೆ. ಇದು ನನ್ನ ಹೈಕಮಾಂಡ್, ನನ್ನ ಶಾಸಕ, ನನ್ನ ಪಕ್ಷವಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಎಂ ಆಯ್ಕೆ ಕಗ್ಗಂಟು ಮುಂದುವರಿದಿದ್ದು ಡಿ.ಕೆ.ಶಿವಕುಮಾರ್ ಎಲ್ಲ ರೀತಿಯ ಪಟ್ಟುಗಳನ್ನು ಹಾಕಿದ್ದು 60ಕ್ಕಿಂತ ಹೆಚ್ಚಿನ ಶಾಸಕರು ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರ ಸಭೆ ನಡೆಸಲಾಗಿದೆ. ಹಿರಿಯ ನಾಯಕರ ಅಭಿಪ್ರಾಯಗಳನ್ನು ಖರ್ಗೆ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.
ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಹಲವು ಸಭೆಯಲ್ಲಿ ವೀಕ್ಷಕರಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮತ್ತು ಪಕ್ಷದ ನಾಯಕರಾದ ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ, ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.