i
ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದ ಬಾಂಬೆ ಬಾಯ್ಸ್ ಗಳು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಸಿದ್ದರಾಮಯ್ಯನವರ ಆಪ್ತರು ಹಾಗೂ ಬಾಂಬೆ ಬಾಯ್ಸ್ ಗಳು ತಿರುಗಿ ಬಿದ್ದಿದ್ದಾರೆ.
ಮಾಜಿ ಕಾಂಗ್ರೆಸಿಗರಾದ ಬಿಜೆಪಿ ನಾಯಕ ಡಾ.ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ? ಎಂದು ಪ್ರಶ್ನಿಸಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾಡಿರುವ ಸರಣಿ ಟ್ವೀಟ್ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.
2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು ಎಂದು ಗಂಭೀರ ಆರೋಪವನ್ನು ಅವರು ಸಿದ್ದರಾಮಯ್ಯ ವಿರುದ್ಧ ಮಾಡಿ ಟ್ವೀಟ್ ಮಾಡಿದ್ದಾರೆ.
ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅದೇ ರೀತಿ ಮತ್ತೊಬ್ಬ ಬಾಂಬೆ ಬಾಯ್ಸ್ ಬಿಜೆಪಿ ನಾಯಕ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಸೋಮಶೇಖರ್, ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದು ಎಂದು ಸೋಮಶೇಖರ್ ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ನಂತರದ ದಿನಗಳಲ್ಲಿ ಎಸ್ಟಿ ಸೋಮಶೇಖರ್, ಡಾ.ಸುಧಾಕರ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಒಟ್ಟು 16 ಶಾಸಕರು ಬಂಡಾಯವೆದ್ದಿದ್ದರು. ಪರಿಣಾಮ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುರಿದುಬಿದ್ದಿತ್ತು ಎನ್ನುವುದು ಮಹತ್ವವಾಗಿದೆ.