i
ಚಿತ್ರದುರ್ಗ ಜಿಲ್ಲಾ ಕ್ರೀಡಾಶಾಲೆಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2023-24ನೇ ಸಾಲಿಗೆ ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ವಾಲಿಬಾಲ್ ಹಾಗೂ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ 2022-23ನೇ ಸಾಲಿನಲ್ಲಿ ಜಿಲ್ಲೆಯ ಪ್ರತಿಭಾವಂತ ಬಾಲಕ ಹಾಗೂ ಬಾಲಕಿಯರನ್ನು ಗುರುತಿಸಿ ಕ್ರೀಡಾಶಾಲೆಗೆ ಪ್ರವೇಶ ನೀಡಲಾಗುವುದು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 4ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ 5ನೇ ತರಗತಿಗೆ ಸೇರಲು ಅರ್ಹರಾಗಿರಬೇಕು. 2023ರ ಜೂನ್ 1ಕ್ಕೆ 10 ವರ್ಷ ಮತ್ತು 11 ವರ್ಷ ಮೀರದ ಬಾಲಕ ಮತ್ತು ಬಾಲಕಿಯರು ಆಯ್ಕೆಯಲ್ಲಿ ಭಾಗವಹಿಸಬಹುದು. ಆಯ್ಕೆಯಲ್ಲಿ ಅಭ್ಯರ್ಥಿಗಳು ದೈಹಿಕ ಸಾಮಥ್ರ್ಯ, ಶಕ್ತಿ, ಚಾಕಚಕ್ಯತೆ, ಸಹಿಷ್ಣುತೆ, ಕುಶಲತೆ, ವೇಗ ಹಾಗೂ ಆಯಾ ಕ್ರೀಡೆಗೆ ಅಗತ್ಯವಿರುವ ಎತ್ತರ ಪರೀಕ್ಷಿಸಿ ಒಟ್ಟಾರೆ ಶೇ.50 ಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ ಯೋಗ್ಯತಾನುಸಾರ ಆಯ್ಕೆಗೆ ಪರಿಗಣಿಸಲಾಗುವುದು.
ಕ್ರೀಡೆಗಳು: ಅಥ್ಲೆಟಿಕ್ಸ್ ಹಾಗೂ ವಾಲಿಬಾಲ್: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಯ್ಕೆ ನಡೆಸಲಾಗುತ್ತಿದ್ದು, ಆಯ್ಕೆ ನಡೆಯುವ ಸ್ಥಳ, ವೇಳೆ ಹಾಗೂ ದಿನಾಂಕಗಳ ವಿವರ ಈ ಕೆಳಗಿನಂತಿದೆ. ಮೇ.22 ರಂದು ಬೆಳಿಗ್ಗೆ 10 ಗಂಟೆಗೆ ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಮೇ. 23 ರಂದು ಬೆಳಿಗ್ಗೆ 10 ಗಂಟೆಗೆ ಚಳ್ಳಕೆರೆ ತಾಲ್ಲೂಕು ಕ್ರೀಡಾಂಗಣ, ಮೇ.24 ರಂದು ಬೆಳಿಗ್ಗೆ 10 ಗಂಟೆಗೆ ಹೊಳಲ್ಕೆರೆ ತಾಲ್ಲೂಕು ಕ್ರೀಡಾಂಗಣ, ಮೇ.25 ರಂದು ಬೆಳಿಗ್ಗೆ 10 ಗಂಟೆಗೆ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣ, ಮೇ.26 ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯೂರು ತಾಲ್ಲೂಕು ಕ್ರೀಡಾಂಗಣ, ಮೇ.27 ರಂದು ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
ಆಸಕ್ತ ಅರ್ಹ ಬಾಲಕ, ಬಾಲಕಿಯರು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ಧೃಢೀಕರಿಸಿದ ವಯೋಮಿತಿ ಪ್ರಮಾಣ ಪತ್ರದೊಂದಿಗೆ ನಿಗಧಿಪಡಿಸಿದ ದಿನಾಂಕದಂದು ಆಯ್ಕೆ ನಡೆಯುವ ಸ್ಥಳದಲ್ಲಿ ಸೂಚಿಸಿದ ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಜಿಲ್ಲಾ ಮಟ್ಟದ ಆಯ್ಕೆಯನ್ನು ಇದೇ ಮೇ. 29 ರಂದು ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ತಾಲ್ಲೂಕು ಕೇಂದ್ರಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಮೇ. 29 ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಟ್ರಯಲ್ಸ್ನಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ ದೂರವಾಣಿ ಸಂಖ್ಯೆ 9611673475, ಅಥ್ಲೆಟಿಕ್ಸ್ ತರಬೇತುದಾರರು ತಿಪ್ಪಣ್ಣ ಎಸ್. ಮಾಳಿ ದೂರವಾಣಿ ಸಂಖ್ಯೆ 9380889647 ಗೆ ಸಂಪರ್ಕಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.