i
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ಖ್ಯಾತಿಯ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ನಲ್ಲಿ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಬ್ಯಾಂಕಾಕ್ ಗೆ ಹೋಗಿದ್ದ ಸಂದರ್ಭದಲ್ಲಿ ಸ್ಪಂದನಾ ಅವರ ಸಹೋದರ ಸಹೋದರಿಯರ ಶಾಪಿಂಗ್ ಮುಗಿಸಿಕೊಂಡು ಹೋಟೆಲ್ ರೂಮ್ಗೆ ತೆರಳುವಾಗ ಹೃದಯಾಘಾತವಾಗಿದೆ ಎನ್ನಲಾಗಿದೆ.
ಪ್ರತಿದಿನ ಜಿಮ್, ಡಯೆಟ್ ಮಾಡುತ್ತಿದ್ದ ಸ್ಪಂದನಾ ಅವರು ದಿಢೀರ್ ಅಂತಾ 16 ಕೆಜಿ ತೂಕ ಇಳಿಸಿಕೊಂಡಿದ್ದರು ಎನ್ನಲಾಗುತ್ತಿದೆ. ನಟ ವಿಜಯ್ ರಾಘವೇಂದ್ರ, ಸ್ಪಂದನಾ ತಂದೆ ಬಿ.ಕೆ.ಶಿವರಾಮ್ ಬ್ಯಾಂಕಾಕ್ಗೆ ತೆರಳಿದ್ದಾರೆ.
ಸ್ಪಂದನಾ ಹಾಗೂ ನಟ ವಿಜಯ ರಾಘವೇಂದ್ರ ಅವರು 2007ನೇ ಸಾಲಿನ ಆಗಸ್ಟ್ 26 ರಂದು ಮದುವೆ ಆಗಿದ್ದರು. ಸ್ಪಂದನಾ ತಂದೆ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಬಿಕೆ ಶಿವರಾಮ್ ಅವರ ಪುತ್ರಿ. ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ.
ಮೃತದೇಹ ಬೆಂಗಳೂರಿಗೆ ಶಿಫ್ಟ್- ಬ್ಯಾಂಕಾಕ್ ನಲ್ಲಿ ಪುತ್ರಿ ಸ್ಪಂದನಾ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಸುದ್ದಿ ತಿಳಿದ ಕೂಡಲೇ ಸ್ಪಂದನಾ ತಂದೆ ಹಾಗೂ ಸಹೋದರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬ್ಯಾಂಕಾಕ್ಗೆ ತೆರಳಿದ್ದಾರೆ. ಆ.8 ರಂದು ಮಂಗಳವಾರ ಬ್ಯಾಂಕಾಂಕ್ನಿಂದ ಬೆಂಗಳೂರಿಗೆ ಸ್ಪಂದನಾ ಮೃತದೇಹವನ್ನು ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಬಹಳ ಪ್ರೀತಿಸುತ್ತಿದ್ದರು. ಬಿಗ್ ಬಾಸ್ ಸ್ಪರ್ಧಿಯಾಗಿದ್ಧಾಗ ವಿಜಯ ರಾಘವೇಂದ್ರ, ಪತ್ನಿ ಸ್ಪಂದನಾ ಫೋಟೋ ಹಿಡಿದು ಮಾತನಾಡುತ್ತಾ, ಭಾವುಕರಾಗಿದ್ದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಿಂದ ಹೊರ ಬರುವ ಮುನ್ನವೇ ಸ್ಯಾಂಡಲ್ವುಡ್ಗೆ ಇನ್ನೊಂದು ಆಘಾತ ಉಂಟಾಗಿದ್ದು ಗಣ್ಯರು ವಿಜಯ ರಾಘವೇಂದ್ರ ನಿವಾಸದತ್ತ ತೆರಳುತ್ತಿದ್ದಾರೆ. ಸ್ಪಂದನಾ ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದರು. ರವಿಚಂದ್ರನ್ ಜೊತೆ ಅಪೂರ್ವ ಸಿನಿಮಾದಲ್ಲಿ ಕೂಡಾ ಸ್ಪಂದನಾ ನಟಿಸಿದ್ದರು.
ಇದೇ ಸಂದರ್ಭದಲ್ಲಿ ಮಹಿಳೆಯರಲ್ಲಿಯೂ ಹೆಚ್ಚುತ್ತಿರುವ ಹೃದಯಾಘಾತದ ಕುರಿತು ಆತಂಕ ಹೆಚ್ಚಾಗಿದೆ. ಬಿಪಿ ಲೋ ಅಥವಾ ಹೆಚ್ಚಾಗಿ ಹೃದಯಾಘಾತ ಹೆಚ್ಚುತ್ತಿರುವುದು, ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತಿರುವುದು ಹೆಚ್ಚಾಗುತ್ತಿದೆ. ಚಳಿಗಾಲದಲ್ಲಿ ಅಥವಾ ಚಳಿ ಹೆಚ್ಚಿರುವ ದೇಶಗಳಿಗೆ ಹೋದಾಗ ಇಂತಹ ಹೃದಯಾಘಾತದ ರಿಸ್ಕ್ ಹೆಚ್ಚಾಗುತ್ತಿರುವುದು ಕೂಡ ಕಂಡುಬರುತ್ತಿದೆ.
ಇತ್ತೀಚೆಗೆ ಸುಷ್ಮಿತಾ ಸೇನ್ ಅವರು ಹೃದಯಾಘಾತಕ್ಕೆ ಸಂಬಂಧಪಟ್ಟಂತೆ ಆಂಜಿಯೊಗ್ರಫಿ ಮಾಡಿಸಿಕೊಂಡಿದ್ದರು. ಅವರು ಹೃದಯಕ್ಕೆ ಸ್ಟೆಂಟ್ ಹಾಕಿಸಿಕೊಂಡಿದ್ದರು. ತನ್ನ ಇನ್ಸ್ಟಾಗ್ರಾಂ ಅಭಿಮಾನಿಗಳಿಗೆ ಅವರು ಆರೋಗ್ಯ ಸಲಹೆಯನ್ನು ನೀಡಿದ್ದಾರೆ. ನೀವು ಯುವಕ ಯುವತಿಯರಾಗಿರಬಹುದು, 20 ವರ್ಷ ವಯಸ್ಸಿನ ಆಸುಪಾಸಿನಲ್ಲಿರಬಹುದು. ನಿಮಗೆ ಹೃದಯದ ತೊಂದರೆ ಬಾರದು ಎಂದು ಯಾರಾದರೂ ಹೇಳಿದರೆ ಕೇಳಬೇಡಿ. ಈಗ ಹೃದಯಘಾತ ಕೇವಲ ಪುರುಷರ ಸಮಸ್ಯೆಯಲ್ಲ, ಮಹಿಳೆಯರಿಗೂ ಹೃದಯಾಘಾತವಾಗುತ್ತಿದೆ. ಭಯಪಡಬೇಡಿ, ಸುರಕ್ಷತೆ, ಕಾಳಜಿ ಕುರಿತು ಹೆಚ್ಚಿನ ಗಮನ ನೀಡಿ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಜಗತ್ತಿನಾದ್ಯಂತ ಸಾಕಷ್ಟು ಮಹಿಳೆಯರ ಸಾವಿಗೆ ಹೃದಯದ ಕಾಯಿಲೆ ಪ್ರಮುಖ ಕಾರಣವಾಗುತ್ತಿದೆ. ಅನೇಕ ಮಹಿಳೆಯರು ಹೃದ್ರೋಗವನ್ನು ಪುರುಷರ ಕಾಯಿಲೆ ಎಂದು ಭಾವಿಸಿದ್ದಾರೆ. ಆದರೆ, ಮಹಿಳೆಯರೂ ಹೃದಯಾಘಾತದಿಂದ ಮೃತಪಡಬಹುದು ಎನ್ನುವುದು ಸತ್ಯ. ಆದರೆ, ಹೃದಯದ ಆರೋಗ್ಯವನ್ನು ಕಾಪಾಡಲು ಮಹಿಳೆಯರಿಗೆ ಹಲವು ದಾರಿಗಳಿವೆ.
ಮಹಿಳೆಯರಲ್ಲಿ ಹೃದಯದ ಕಾಯಿಲೆಗಳ ಲಕ್ಷಣಗಳು ಪುರುಷರಿಗಿಂತ ಭಿನ್ನವಾಗಿರಬಹುದು. ವಾಕರಿಕೆ,, ವಾಂತಿ, ಬೆನ್ನು ನೋವು, ದವಡೆ ನೋವಿನಂತಹ ಲಕ್ಷಣಗಳು ಇರುತ್ತವೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕೆಲವು ಅಂಶಗಳು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು.
ಹೃದಯದ ಕಾಳಜಿಗೆ 5 ದಾರಿಗಳು-
ಡಯೆಟ್-ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕಡಿಮೆ ಉಪ್ಪು ಇರುವ ಆಹಾರ ಸೇವಿಸುವುದು ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಆಹಾರಗಳ ಬದಲು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ಗಳನ್ನು ಸೇವಿಸಲು ಆದ್ಯತೆ ನೀಡಿ.
ವ್ಯಾಯಾಮ-ಪ್ರತಿ ನಿತ್ಯ ನಿಯಮಿತ ದೈಹಿಕ ಚಟುವಟಿಕೆಯು ಹೃದಯದ ಕಾಯಿಲೆಯ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ವ್ಯಾಯಾಮ ಅಥವಾ 75 ನಿಮಿಷಗಳ ತೀವ್ರ-ತೀವ್ರತೆಯ ವ್ಯಾಯಾಮ ಮಾಡಲು ಆದ್ಯತೆ ನೀಡಿ.
ಒತ್ತಡ ಕಡಿಮೆ ಮಾಡಿ-ತೀವ್ರ ಒತ್ತಡವು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ನಿಮ್ಮ ಒತ್ತಡ ಕಡಿಮೆ ಮಾಡಲು ಆರೋಗ್ಯಕಾರಿ ದಾರಿಗಳನ್ನು ಹುಡುಕಿ. ಧ್ಯಾನ, ಯೋಗ ಮತ್ತು ಆಳವಾದ ಉಸಿರಾಟ ಇತ್ಯಾದಿಗಳ ಮೂಲಕ ಒತ್ತಡ ತಗ್ಗಿಸಿಕೊಳ್ಳಿ.
ಧೂಮಪಾನ-ಮಹಿಳೆಯರೂ ಈಗ ಧೂಮಪಾನದ ಕುರಿತು ಹೆಚ್ಚಿನ ಆಸಕ್ತಿವಹಿಸುತ್ತಿರುವುದು ಆತಂಕಕಾರಿ. ಧೂಮಪಾನದ ಅಭ್ಯಾಸ ಇದ್ದರೆ ಬಿಟ್ಟುಬಿಡಿ.
ಆರೋಗ್ಯ ತಪಾಸಣೆ-ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು. ರಕ್ತದ ಪರೀಕ್ಷೆ, ಯೂರಿನ್ ಪರೀಕ್ಷೆ ಇತ್ಯಾದಿಗಳ ಮೂಲಕ ಹೃದಯದ ಆರೋಗ್ಯ ತಿಳಿದುಕೊಳ್ಳಿ. ಬಿಪಿ ಲೋ ಅಥವಾ ಹೈ ಇದೆಯೇ ಎಂದು ನಿಯಮಿತವಾಗಿ ಟೆಸ್ಟ್ ಮಾಡಿಕೊಳ್ಳಿ.